ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ವರ್ಷವೂ ವಿಳಂಬ!; ಪಠ್ಯಕ್ರಮ ಪೂರ್ಣಗೊಳಿಸಲು ಬೇಕಿದೆ ಕಾಲಾವಕಾಶ

SSLC
Published on

| ದೇವರಾಜ್ ಕನಕಪುರ ಬೆಂಗಳೂರು

ಕರೊನಾ ಕಾರಣದಿಂದ ಕಳೆದೆರಡು ವರ್ಷಗಳಿಂದ ವಿಳಂಭವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ವರ್ಷವೂ ಬಹುತೇಕ ವಿಳಂಭವಾಗುವ ಸಾಧ್ಯತೆ ಇದೆ. ಪಠ್ಯಕ್ರಮ ಪರಿಪೂರ್ಣಗೊಳಿಸಲು ಕಲಾವಕಾಶದ ಅವಶ್ಯಕತೆ ಇರುವುದರಿಂದ ಮೇ-ಜೂನ್ ವೇಳೆಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆಲೋಚಿಸಿದೆ.

ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಿಂದ ಏಪ್ರಿಲ್ ಮೊದಲವಾರದೊಳಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುತ್ತಿತ್ತು. ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ವೇಳೆಗೆ ಅಧಿಸೂಚನೆ ಹೊರಡಿಸಬೇಕಾಗಿತ್ತು. ಆದರೆ, ನವೆಂಬರ್ ತಿಂಗಳು ಮುಗಿಯುತ್ತಿದ್ದರೂ, ಅಧಿಸೂಚನೆ ಹೊರಡಿಸದೇ ಇರುವುದರಿಂದ ಪರೀಕ್ಷೆಗಳು ನಿಗದಿತ ಅವಧಿಯಲ್ಲಿ ನಡೆಯುವುದಿಲ್ಲವೆಂಬುದು ಖಚಿತವಾಗಿದೆ. ಶೈಕ್ಷಣಿಕ ಅವಧಿ ಆರಂಭವಾಗುವುದು ವಿಳಂಬವಾಗಿದೆ. ಅಲ್ಲದೆ, ಪಠ್ಯಕ್ರಮದಲ್ಲಿ ಯಾವುದೇ ಕಡಿತ ಮಾಡಿಲ್ಲ ಎಂದು ಹೇಳಲಾಗಿದೆ. ಪಠ್ಯಕ್ರಮ ಪೂರ್ಣಗೊಳಿಸಿ ಪರೀಕ್ಷೆ ನಡೆಸಲು ಮಂಡಳಿಗೆ ಮತ್ತಷ್ಟು ಸಮಯದ ಅವಶ್ಯಕತೆ ಇದೆ. ಲಭ್ಯವಿರುವ ಶೈಕ್ಷಣಿಕ ಅವಧಿಯೊಳಗೆ ಪಠ್ಯಕ್ರಮ ಪೂರ್ಣಗೊಳಿಸುವುದು ಶಿಕ್ಷಕರಿಗೆ ಸವಾಲಿನ ಪ್ರಶ್ನೆಯಾಗಿದೆ. ಕಳೆದ ವರ್ಷದಂತೆ ಈ ವರ್ಷ ಕೂಡ ಕನಿಷ್ಠ ಶೇ.20-30 ಪಠ್ಯಕ್ರಮ ಕಡಿತ ಮಾಡಿದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಪಠ್ಯಕ್ರಮ ಕಡಿತ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

2 ವರ್ಷ ವಿಳಂಬ: ಕರೊನಾ ಮೊದಲನೇ ಅಲೆ ಬಂದಾಗ 2020ರ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು ಎಂದು ಬಹುತೇಕ ಪಾಲಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದರು. ಆದರೆ, ಶಿಕ್ಷಣ ಇಲಾಖೆಯು ಜೂನ್-ಜುಲೈನಲ್ಲಿ ಪರೀಕ್ಷೆ ನಡೆಸಿ, ಆಗಸ್ಟ್ ಮೊದಲ ವಾರದಲ್ಲಿ ಫಲಿತಾಂಶ ಬಿಡುಗಡೆ ಮಾಡಿತ್ತು. ಇನ್ನೂ 2021ರಲ್ಲಿ ಕರೊನಾ ಎರಡನೇ ಅಲೆ ಇದ್ದರಿಂದ ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕೇವಲ ಎರಡು ದಿನಗಳಲ್ಲಿ ನಡೆಸಿ ಪರೀಕ್ಷೆ ಬರೆದವೆರೆಲ್ಲಾ ಪಾಸ್ ಎಂದು ಮೊದಲೇ ಘೋಷಣೆ ಮಾಡಿ ಜೂನ್-ಜುಲೈ ಅವಧಿಯಲ್ಲೇ ಪರೀಕ್ಷೆ ನಡೆಸಿ, ಆಗಸ್ಟ್ 10ರಂದು ಫಲಿತಾಂಶ ಬಿಡುಗಡೆ ಮಾಡಿತ್ತು.

ಪ್ರತಿ ವರ್ಷ ಪಠ್ಯಕ್ರಮ ಪೂರ್ಣ ಗೊಳಿಸಲು 240 ದಿನಗಳು ದೊರೆಯುತ್ತಿದ್ದವು. ಈ ಬಾರಿ 180 ದಿನಗಳು ಸಿಕ್ಕಿವೆ. ಈ ಅವಧಿಯಲ್ಲಿ ಪಠ್ಯಕ್ರಮ ಪೂರ್ಣ ಗೊಳಿಸುವುದು ಕಷ್ಟ. ಬೇಗ ಮುಗಿಸಿದರೆ, ಮಕ್ಕಳಿಗೆ ಪಾಠ ಅರ್ಥವಾಗೋಲ್ಲ. ಕನಿಷ್ಠ ಶೇ.20 ಪಠ್ಯಕ್ರಮ ಕಡಿತಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

| ಎಚ್.ಕೆ.ಮಂಜುನಾಥ್ ರಾಜ್ಯಾಧ್ಯಕ್ಷ, ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net