

ದೇವದುರ್ಗ: ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು ಮಕ್ಕಳು ಯಾವುದಕ್ಕೂ ಧೃತಿಗೆಡಬಾರದು. ಪರೀಕ್ಷೆ ಧೈರ್ಯವಾಗಿ ಬರೆಯಬೇಕು ಎಂದು ಮುಖ್ಯಶಿಕ್ಷಕ ಹೊನಕೇರಪ್ಪ ಹೇಳಿದರು.
ತಾಲೂಕಿನ ಗಬ್ಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 1998ರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಬಳಗದಿಂದ ಪರೀಕ್ಷೆ ಪ್ಯಾಡ್, ಪೆನ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತೆ ಪರೀಕ್ಷೆ ನಡೆಸಲಾಗಿದೆ. ಎಲ್ಲ ಪರೀಕ್ಷೆಗಳಂತೆ ಅಂತಿಮ ಪರೀಕ್ಷೆಯನ್ನು ಎದುರಿಸಬೇಕು ಎಂದರು.
ವಿದ್ಯಾರ್ಥಿ ಬಳಗದ ಪ್ರತಿನಿಧಿ ಶಂಕರ್ ಜಗ್ಲಿ ಮಾತನಾಡಿ, ಸತತ ಪ್ರಯತ್ನದ ಮೂಲಕ ಗುರಿ ಸಾಧಿಸಲು ಸಾಧ್ಯ. ಗುರುಗಳು ಹೇಳಿ ಕೊಡುವ ಪಾಠದತ್ತ ಗಮನವಿರಲಿ. ಗುರುಗಳಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಗೆಲುವಿನ ಬೆನ್ನತ್ತಬಹುದು ಎಂದರು.