

ಸದೇಶ್ ಕಾರ್ಮಾಡ್ ಮೈಸೂರು
ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾನಾ ರೀತಿಯ ಪ್ರಯೋಗಗಳು ವರ್ಷಂಪ್ರತಿ ನಡೆಯುತ್ತಲೇ ಇರುತ್ತದೆ. ಕೆಲವು ಪ್ರಯೋಗಗಳು ಉತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ. ಅಂತಹ ಒಂದು ಉತ್ತಮ ಪ್ರಯೋಗಕ್ಕೆ ಈ ಬಾರಿಯ ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಮುಂದಾ ಗಿದೆ.
ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವುದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಉತ್ತೇಜಿಸುವುದು, ಪರೀಕ್ಷೆ ಮುಗಿಯುವರೆಗೆ ಮನೆಯಲ್ಲಿ ಸೀರಿಯಲ್, ಸಿನಿಮಾಗೆ ಬ್ರೇಕ್, ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿ ಹಾಗೂ ಶಾಲೆಗಳಿಗೆ ಪುರಸ್ಕಾರ ನೀಡುವುದು, ವಿದ್ಯಾರ್ಥಿಗಳು ಬೆಳಗ್ಗೆ ಎದ್ದು ಓದುತ್ತಿದ್ದಾರೆಯೇ ಎಂದು ಖುದ್ದಾಗಿ ಶಾಸಕರೇ ಗಮನಿಸುತ್ತಿರುವುದು, ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಸನ್ಮಾನ… ಈ ರೀತಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ವಿವಿಧ ಕಾರ್ಯಕ್ರಮ ವನ್ನು ಈ ಬಾರಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ.
ಕೃಷ್ಣರಾಜ ಕ್ಷೇತ್ರದಲ್ಲಿ ಈ ಬಾರಿ ಒಟ್ಟು ಒಟ್ಟು 4,291ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ. ಈ ಪೈಕಿ ಎಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸುವ ಸಲುವಾಗಿ ಟೆಸ್ಟ್‌ವೊಂದನ್ನು ನಡೆಸಲಾಗಿದ್ದು, ಟೆಸ್ಟ್‌ನಲ್ಲಿ ಒಟ್ಟು 1,746 ಮಕ್ಕಳು ಅನುತ್ತೀರ್ಣ ಗೊಂಡಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಅವರು ಈ ಬಾರಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಲು ಮಕ್ಕಳಿಗೆ ಒಟ್ಟು 6 ಟೆಸ್ಟ್‌ಗಳನ್ನು ನಡೆಸಲು ಉದ್ದೇಶಲಾಗಿದೆ. ಟೆಸ್ಟ್‌ನಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ಒಂದು ತಿಂಗಳು ಬಾಕಿ ಇದೆ ಅನ್ನುವಾಗ ಶಾಲೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಮಾರ್ಗದರ್ಶನ ಮಾಡಲಾಗುವುದು. ಸಾಕಷ್ಟು ವಿದ್ಯಾರ್ಥಿಗಳು ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗುತ್ತಿದ್ದು, ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳಿಗೆ ಕಲಿಸಲಾಗುತ್ತಿದೆ.
ಶಾಸಕರಿಂದ ವಿದ್ಯಾರ್ಥಿಗಳಿಗೆ ಕರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಿಕೊಟ್ಟಿರುವುದು ಮಾತ್ರವಲ್ಲದೆ ಅವರು ಕಲಿಯುತ್ತಿದ್ದಾರೆಯೇ ಎಂಬುದನ್ನು ಖುದ್ದಾಗಿ ಶಾಸಕ ಎಸ್.ಎ. ರಾಮದಾಸ್ ಅವರೇ ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗೆ ಕರೆ ಮಾಡುತ್ತಿದ್ದಾರೆ. ಶಾಸಕರು ಪ್ರತಿದಿನ ಒಂದೆರಡು ಮನೆಗಳಿಗೆ ಕರೆ ಮಾಡಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ ಎಂದು ವಿಚಾರಿಸಿ ಕೊಳ್ಳುತ್ತಿದ್ದಾರೆ. ಅಲ್ಲದೆ ಶಾಸಕ ಕಚೇರಿಯಿಂದಲೂ ಕರೆಗಳು ಹೋಗುತ್ತಿವೆ. ಹೀಗಾಗಿ ಬಹುಪಾಲು ಮಕ್ಕಳು ಓದಿನ ಕಡೆಗೆ ಗಮನ ಹರಿಸಲು ಪ್ರಾರಂಭಿಸಿದ್ದಾರೆ.
ಸೀರಿಯಲ್, ಸಿನಿಮಾಗೆ ಬ್ರೇಕ್: ಟೆಸ್ಟ್‌ನಲ್ಲಿ ಅನುತ್ತೀರ್ಣಗೊಂಡ ಹಾಗೂ ಕಲಿಕೆಯಲ್ಲಿ ತೀರಾ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಶಾಲೆಯಲ್ಲಿ ವಿಶೇಷ ತರಗತಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಕೇವಲ ಶಾಲೆಯಲ್ಲಿ ಕಲಿತರೆ ಮಾತ್ರ ಸಾಲದು ಮನೆಯಲ್ಲೂ ಅಭ್ಯಾಸ ಮಾಡಿದರೆ ಮಾತ್ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂಬುದನ್ನು ಮನಗಂಡು ಮನೆಯಲ್ಲೂ ಮಕ್ಕಳು ನಿರಂತರವಾಗಿ ಕಲಿಯುವ ವಾತಾವರಣ ನಿರ್ಮಾಣ ಮಾಡಲಾಗಿದೆ.
ಸಾಕಷ್ಟು ಮನೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಇರುವುದಿಲ್ಲ. ಕೆಲವು ಮನೆಗಳಲ್ಲಿ ಪಾಲಕರು ರಾತ್ರಿ ವೇಳೆ ಸೀರಿಯಲ್ ಹಾಗೂ ಸಿನಿಮಾ ನೋಡುವ ಅಭ್ಯಾಸ ರೂಢಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳು ಏಕಾಗ್ರತೆಯಿಂದ ಕಲಿಯಲು ತೊಡಕು ಉಂಟಾಗುತ್ತಿದೆ. ಹೀಗಾಗಿ ಎಲ್ಲ ಪಾಲಕರನ್ನು ಕರೆಯಿಸಿ ಸಭೆ ನಡೆಸಿರುವ ರಾಮದಾಸ್, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವರೆಗೆಗೆ ಮನೆಯಲ್ಲಿ ಸೀರಿಯಲ್ ಹಾಗೂ ಸಿನಿಮಾ ನೋಡುವುದಿಲ್ಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ. ಪಾಲಕರು ಸೀರಿಯಲ್ ನೋಡುತ್ತಿದ್ದಾರೆಯೇ, ಮಕ್ಕಳು ಓದುತ್ತಿದ್ದಾರೆಯೇ ಎಂದು ಖುದ್ದಾಗಿ ಶಾಸಕ ರಾಮದಾಸ್ ಅವರೇ ಪರಿಶೀಲಿಸುತ್ತಿದ್ದಾರೆ.
ಖುದ್ದಾಗಿ ಶಾಸಕರೇ ನಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಇಷ್ಟೊಂದು ಕಾಳಜಿ ತೋರುವಾಗ ನಾವು ಏತಕ್ಕೆ ನಮ್ಮ ಮಕ್ಕಳ ಭವಿಷ್ಯ ರೂಪಿಸಲು ಒಂದಷ್ಟು ತ್ಯಾಗ ಮಾಡಬಾರದು ಎಂಬ ನಿಲುವಿಗೆ ಹಲವು ಪಾಲಕರು ಬಂದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮನೆಗೆ ಬೆಳಗ್ಗೆ 5ಕ್ಕೆ ಕರೆ ಮಾಡುತ್ತಿರುವ ರಾಮದಾಸ್ ‘ಮಕ್ಕಳು ಓದಲು ಎದ್ದಿದ್ದಾರೆಯೇ’ ಎಂದು ವಿಚಾರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಕಲಿಕೆಯಲ್ಲಿ ಆಸಕ್ತಿ ತೋರದ ಮಕ್ಕಳು ಸಹ ಕಲಿಯಲು ಪ್ರಾರಂಭಿಸಿದ್ದು, ಇದು ಈ ಬಾರಿಯ ಪರೀಕ್ಷೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
1 ಲಕ್ಷ ರೂ. ನಗದು ಬಹುಮಾನ
ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆಯವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಲೆಗಳಿಗೆ ಶೇ.100 ಫಲಿತಾಂಶ ಪಡೆಯುವ ಶಾಲೆಗಳಿಗೆ 1 ಲಕ್ಷ ರೂ.ನಗದು ಬಹುಮಾನ ನೀಡಲಾಗುವುದು ಎಂದು ಶಾಸಕ ಎಸ್.ಎ. ರಾಮದಾಸ್ ಘೋಷಿಸಿದ್ದಾರೆ. ಅಲ್ಲದೆ ಪ್ರತಿ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ಮಕ್ಕಳಿಗೆ ಇತ್ತೀಚೆಗೆ ಟೆಸ್ಟ್ ನಡೆಸಲಾಗಿದ್ದು, ಅದರಲ್ಲಿ ಒಟ್ಟು 1,746 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಆ ಮಕ್ಕಳ ಪಾಲಕರನ್ನು ಕರೆಯಿಸಿ ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಮಕ್ಕಳನ್ನು ಯಾವ ರೀತಿ ಪರೀಕ್ಷೆಗೆ ಸಜ್ಜುಗೊಳಿಸಬೇಕು ಎಂಬ ಕುರಿತು ಮುಖ್ಯಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನೆಗೆ ಬೆಳಗ್ಗೆ ಕರೆ ಮಾಡಿ ಮಕ್ಕಳು ಓದುತ್ತಿದ್ದಾರೆಯೇ ವಿಚಾರಿಸುತ್ತಿದ್ದೇನೆ. ಮಕ್ಕಳಿಗೆ ಕಲಿಕೆಗೆ ಬೇಕಾದ ಎಲ್ಲ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗಿದ್ದು, ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿ ಇದ್ದೇವೆ.
ಎಸ್.ಎ. ರಾಮದಾಸ್, ಶಾಸಕ