

ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ರಾಜಕೀಯ ನಡೆ ಕೊನೆಗೂ ಬಹಿರಂಗವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಹೊ ಪಕ್ಷ ಘೋಷಣೆ ಮಾಡುವ ಮೂಲಕ ಹೊಸದಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ವಿಚಾರವಾಗಿ ಇದೀಗ ರೆಡ್ಡಿ ಆಪ್ತ, ಸಹೋದರನಂತಿದ್ದ ಸಚಿವ ಶ್ರೀರಾಮುಲು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಜನಾರ್ಧನ ರೆಡ್ಡಿ ಬುದ್ಧಿವಂತರಾಗಿದ್ದು, ಅಪಾರ ಅನುಭವ ಹೊಂದಿದವರು. ಇಂದಿನವರೆಗೆ ಪ್ರಾಣ ಸ್ನೇಹಿತನಾಗಿ ನನಗೂ, ಬಿಜೆಪಿ ಪಕ್ಷಕ್ಕೂ ಶಕ್ತಿ ತುಂಬಿದ್ದರು. ಇಂದಿನವರೆಗೂ ರೆಡ್ಡಿ ವೈಯಕ್ತಿಕವಾಗಿ ಪಕ್ಷ ಬಿಟ್ಟು ಕೊಟ್ಟಿಲ್ಲ, ಬಿಜೆಪಿಯೂ ಅವರನ್ನು ಬಿಟ್ಟು ಕೊಟ್ಟಿಲ್ಲ. ಇದೀಗ ಅವರ ವೈಯಕ್ತಿಕವಾಗಿ ಹೊಸ ಪಕ್ಷ ಮಾಡಿದ್ದಾರೆ ಎಂದು ಸಚಿವ ರಾಮುಲು ಹೇಳಿದ್ದಾರೆ.
ನಾನು ಪ್ರಾಣ ಸ್ನೇಹಿತನಾಗಿ ರೆಡ್ಡಿಯವರೊಂದಿಗೆ ಬಂಡೆಯಾಗಿ ನಿಂತಿದ್ದೆ. ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ. ಸಿದ್ಧಾಂತ ಬೇರೆ ಇದ್ದಾಗ ಯಾರಿಂದಲೂ ಮನವೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ರೆಡ್ಡಿಯವರ ಹೊಸ ಪಕ್ಷದ ಸ್ಥಾಪನೆಯನ್ನು, ಒಳೆಯದು, ಕೆಟ್ಟದು ಎಂದು ಹೇಳುತ್ತಾ ಚರ್ಚೆ ಮಾಡುತ್ತಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
ರೆಡ್ಡಿ ಒಳ್ಳೆಯ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿರುತ್ತಾರೆ. ಹೀಗಂತ ಕಾರ್ಯಕರ್ತರ ನಮ್ಮ ಜೊತೆ ಇದ್ದಾರೆ. ಇದರಲ್ಲಿ ಯಾವುದೇ ಗೊಂದಲ ಮೂಡುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷಕ್ಕೆ ಹಿನ್ನೆಲೆ ಮತ್ತು ಸಿದ್ಧಾಂತ ಇದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀಳುವುದಿಲ್ಲ ಎಂದು ರಾಮುಲು ಹೇಳಿದರು.
ರಾಜಕಾರಣ ಮತ್ತು ಸ್ನೇಹ ಬೇರೆ. ಸದಾ ಕಾಲಾ ರೆಡ್ಡಿಯವರೊಂದಿಗೆ ಸ್ನೇಹಿತನಾಗಿ ಮುಂದುವರೆಯುತ್ತೇನೆ. ರೆಡ್ಡಿಯವರೊಂದಿಗೆ ನಮ್ಮ ಎಲ್ಲಾ ನಾಯಕರು, ಎಲ್ಲಾ ಸಂದರ್ಭದಲ್ಲಿ ಬೆಂಬಲವಾಗಿ ನಿಂತಿದ್ದರು. ಹೀಗಿದ್ದರೂ ರೆಡ್ಡಿಯವರ ಬಲವಾದ ನಿರ್ಧಾರವಿದ್ದಾಗ ಮತ್ತೆ ಮತ್ತೆ ಮಾತುಕತೆ ನಡೆಸುವ ಅಗತ್ಯವಿಲ್ಲ. ಮನವೋಲಿಕೆ ಮಾಡಿ ಪ್ರಯೋಜನವಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.