

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ತಾಲೂಕು ಕಚೇರಿ ಸೂಪರ್‌ವೈಸರ್ ಕೆ.ಟಿ.ಶ್ರೀನಿವಾಸಮೂರ್ತಿ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಐದು ದಿನಗಳ ಪೊಲೀಸರ ವಶಕ್ಕೆ ನೀಡಿದೆ.
ಅಕ್ರಮ ಆಸ್ತಿ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿದ ಕಾರಣ ಲೋಕಾಯುಕ್ತ ಪೊಲೀಸರು ಶ್ರೀನಿವಾಸಮೂರ್ತಿಯನ್ನು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
೨.೮೬ ಕೋಟಿ ಹೆಚ್ಚು ಅಕ್ರಮ ಆಸ್ತಿ ಪತ್ತೆ:
ಲೋಕಾಯುಕ್ತ ಪೊಲೀಸರು ಮಂಗಳವಾರ ಶ್ರೀನಿವಾಸ್‌ಮೂರ್ತಿಗೆ ಸೇರಿದ್ದ ೧೪ ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ತಪಾಸಣೆ ನಡೆಸಿದಾಗ ೨.೮೬ ಕೋಟಿ ರೂ. ಮೌಲ್ಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ರಿಯಲ್‌ಎಸ್ಟೇಲ್ ಉದ್ಯಮದಲ್ಲಿಯೂ ಹೂಡಿಕೆ ಮಾಡಲಾಗಿದೆ. ಈಗಾಗಲೇ ಐದು ಅಬಕಾರಿ ಪರವಾನಗಿ ಹೊಂದಿರುವುದನ್ನು ಪತ್ತೆ ಮಾಡಿರುವ ಲೋಕಾಯುಕ್ತ ಪೊಲೀಸರಿಗೆ ಆರೋಪಿ ಮತ್ತಷ್ಟು ಅಬಕಾರಿ ಪರವಾನಗಿ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಕೆ.ಟಿ.ಶ್ರೀನಿವಾಸಮೂರ್ತಿ ಹೆಸರಲ್ಲಿ ಮಾತ್ರವಲ್ಲದೇ, ಅವರ ಪತ್ನಿ ರಾಜೇಶ್ವರಿ, ಸಹೋದರಿ ಕೆ.ಟಿ.ಪುಷ್ಪಕಲಾ, ಸಹೋದರ ಕೆ.ಟಿ.ವೆಂಕಟೇಗೌಡ ಹೆಸರಲ್ಲಿಯೂ ಅಕ್ರಮ ಆಸ್ತಿಯನ್ನು ಹೊಂದಿರುವುದು ಗೊತ್ತಾಗಿದೆ.
ಶ್ರೀನಿವಾಸಮೂರ್ತಿಯು ಅಂದ್ರಹಳ್ಳಿ, ಹೆಣ್ಣೂರು ಮತ್ತು ಕೊತ್ತನೂರಿನಲ್ಲಿ ತಲಾ ಎರಡು ನಿವೇಶನ ಹಾಗೂ ಎರಡು ಮನೆಗಳನ್ನು ಹೊಂದಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ಇನ್ನೂ ಕೆಲವೆಡೆ ಬೇನಾಮಿ ಆಸ್ತಿ ಹೊಂದಿರುವ ಸುಳಿವು ಲಭಿಸಿದ್ದು, ಶೋಧ ಮುಂದುವರಿಸಲಾಗಿದೆ. ನೆಲಮಂಗಲ ಸಮೀಪದ ಲಕ್ಕೇನಹಳ್ಳಿಯಲ್ಲಿ ಶ್ರೀನಿವಾಸಮೂರ್ತಿ ಬೃಹತ್ ಬಂಗಲೆಯೊಂದನ್ನು ಇತ್ತೀಚೆಗಷ್ಟೇ ನಿರ್ಮಿಸಿದ್ದು, ಅಲ್ಲಿಯೂ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.