ತುಕ್ಕು ಹಿಡಿಯುವುದಕ್ಕಿಂತ ಸವೆಯುವುದು ಲೇಸು ; ಆದಿಚುಂಚನಗಿರಿ ಶ್ರೀಗಳ ಅಭಿಮತ

New Project
Published on

ಬೆಂಗಳೂರು : ಕಬ್ಬಿಣ ಬಳಸದೇ ಇದ್ದರೆ ತುಕ್ಕು ಹಿಡಿದು ನಾಶವಾಗುತ್ತದೆ. ಹಾಗೆ ತುಕ್ಕು ಹಿಡಿದು ನಾಶವಾಗುವುದರ ಬದಲು ಬಳಕೆಯಾಗಿ ಸವೆಯುವುದು ಲೇಸು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀನಿರ್ಮಲಾನಂದನಾಥ ಮಹಾಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.

ಟೌನ್‌ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್ ಆಯೋಜಿಸಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ 79ನೇ ಜಯಂತ್ಯೋತ್ಸವ ಮತ್ತು ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಕಬ್ಬಿಣದ ತುಂಡು ಹಾಗೆಯೇ ಇಟ್ಟರೆ ತುಕ್ಕು ಹಿಡಿದು ವ್ಯರ್ಥವಾಗುತ್ತದೆ. ಆದರೆ ಅದೇ ಕಬ್ಬಿಣವನ್ನು ಬಳಸಿ ನೇಗಿಲು ಮಾಡಿದರೆ ಅದು ರೈತನ ಹೊಲವನ್ನು ಉತ್ತಿ ಸವೆದು ನಾಶವಾಗುತ್ತದೆ. ಹಿರಿಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಈ ಚಿಂತನೆಯನ್ನು ಹೊಂದಿದ್ದರು. ಅದರಂತೆ ತಮ್ಮ ಜೀವಿತದ ಕೊನೆಯವರೆಗೆ ಸಮಾಜಕ್ಕಾಗಿ ತಮ್ಮನ್ನು ತಾವು ತೇಯ್ದು ಜೀವನ ನಡೆಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ 70ನೇ ಜಗದ್ಗುರುಗಳಾಗಿದ್ದ ಶ್ರೀ ರಮಾನಂದನಾಥ ಮಹಾಸ್ವಾಮಿಗಳು ಕೊನೆಯ ಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಂತ್ಯವಾದ ಘಟನೆಯಿಂದ ನೊಂದ ಪೂಜ್ಯರು, ಸಾಮಾನ್ಯ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯಬೇಕೆಂಬ ಸಂಕಲ್ಪದೊಂದಿಗೆ ಬಿ.ಜಿ.ನಗರದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿದರು. ಅದಕ್ಕೆ ಬೇಕಾದ ವೈದ್ಯರನ್ನು ಸೃಷ್ಟಿಸುವ ಮೆಡಿಕಲ್ ಕಾಲೇಜು ನಿರ್ಮಿಸಬೇಕೆಂದು ಹಠ ಹಿಡಿದು ಮೆಡಿಕಲ್ ಕಾಲೇಜು ಸ್ಥಾಪನೆಯಾಗುವಂತೆ ಮಾಡಿದವರು ದೇವೇಗೌಡರು ಎಂದು ಸ್ವಾಮೀಜಿ ತಿಳಿಸಿದರು.

ಶ್ರೀಗುರುವಾಣಿ ಎಂಬ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಒಕ್ಕಲಿಗರಲ್ಲಿ ಅನೇಕ ನಾಯಕರುಗಳಿದ್ದು, ಅವರುಗಳೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಒಕ್ಕಲಿಗರಲ್ಲಿ ಐಕ್ಯತೆ ಇಲ್ಲದಿರುವುದು ನೋವಿನ ಸಂಗತಿ ಎಂದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಸೇರಿದಂತೆ ಸಮುದಾಯ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕೆ ಕೆ.ಟಿ.ಚಂದ್ರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಆದಿಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಮಹಾತ್ಮರ ಮಾತಿನಿಂದ ಜೀವನ ಪಾವನ : ಸಮಾರಂಭದಲ್ಲಿ ಕೆ.ಟಿ.ಚಂದ್ರು ಅವರ ‘ಜೀವನ ಸೂಕ್ತಿ ಸಾರ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಸಿದ್ಧಗಂಗೆ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮಹಾತ್ಮರ ಮಾತುಗಳಿಮದ ಮನುಷ್ಯನ ಬದುಕು ಪಾವನವಾಗುತದೆ. ಆ ನಿಟ್ಟಿನಲ್ಲಿ ಶ್ರೀ ಬಾಲಗಂಗಾಧರ ಮಹಾಸ್ವಾಮಿಗಳ ಮಾತು ಮತ್ತು ಜೀವನ ಸರ್ವರಿಗೂ ಸ್ಪೂರ್ತಿದಾಯಕ. ಅಂತಹವರ ಒಡನಾಡಿಗಳಾಗಿರುವ ದೇವೇಗೌಡರಿಗೆ ಕಾವೇರಿ ವಿವಾದದ ಎಲ್ಲ ಮಗ್ಗಲುಗಳ ಅರಿವಿದ್ದು, ಅವರು ಮನಸ್ಸು ಮಾಡಿದರೆ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಸಾಧ್ಯ ಎಂದರು.

ಶ್ರೀಗಳಿಂದ ಸಮುದಾಯಕ್ಕೆ ಗೌರವ : ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಸಮುದಾಯಕ್ಕೆ ಗೌರವ ಬಂದಿದೆ. ಬಿಜಿಎಸ್ ಸಂಸ್ಥೆಯು ಇಂದು ವಿಶ್ವಮಾನ್ಯತೆ ಪಡೆದಿದ್ದು, ಶ್ರೀಗಳ ಅನೇಕ ಸಾಧನೆಯಲ್ಲಿ ಅತ್ಯುತ್ತಮ ಉತ್ತರಾಧಿಕಾರಿಗಳನ್ನು ನೀಡಿರುವುದು ಕೂಡಾ ಒಂದು. ಸದ್ಯದ ಪೂಜ್ಯರು ಹಿರಿಯ ಶ್ರೀಗಳ ಆಶಯಕ್ಕೆ ಧಕ್ಕೆಯಾಗದಂತೆ ಸಂಸ್ಥಾನವನ್ನು ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net