

ಶೃಂಗೇರಿ: ಸನಾತನ ಧರ್ಮ ಹಾಗೂ ಆತ್ಮೋದ್ಧಾರಕ್ಕಾಗಿ ಸ್ವಹಿತವಿಲ್ಲದೆ ದುಡಿದ ಶ್ರೀ ಶಂಕರ ಭಗವತ್ಪಾದರ ಉಪದೇಶಗಳನ್ನು ನಾವು ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ನರಸಿಂಹವನದ ಗುರುನಿವಾಸದಲ್ಲಿ ನಾನಾ ಪ್ರಾಂತ್ಯಗಳಿಂದ ಆಗಮಿಸಿದ್ದ ಮರಾಠಿ, ದೇವಾಡಿಗರ ಸಂಘದ ಪದಾಧಿಕಾರಿಗಳನ್ನು ಉದ್ದೇಶಿಸಿ ಅನುಗ್ರಹ ಭಾಷಣಗೈದರು.
ಲೌಕಿಕ ಜಗತ್ತಿನ ನಡುವೆ ಇದ್ದವರಿಗೆ ಸಂಪಾದನೆ ಮಾಡುವುದು, ಜೀವನ ಸಾಗಿಸುವುದು ಕರ್ತವ್ಯವಾಗಿರುತ್ತದೆ. ಅದರ ಜತೆಗೆ ಧರ್ಮದ ಆಚರಣೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನದ ಕಷ್ಟಗಳನ್ನು ಎದುರಿಸುವ ಸಮಚಿತ್ತಭಾವ ನಮ್ಮಲ್ಲಿ ಮೂಡಲು ಸಾಧ್ಯ. ಅತಿಯಾದ ಸಂಪತ್ತು ನಮಗೆ ನೀಡುವ ಸುಖ ತಾತ್ಕಾಲಿಕವಾದುದು. ಮನುಷ್ಯನು ಭಗವಂತನ ಆರಾಧನೆಯನ್ನು ನಿರಂತರ ಮಾಡಿದಾಗ ಮಾತ್ರ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯ ಎಂದರು.
ನಾವು ಗುರಿ ಇಟ್ಟುಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಸುತ್ತಮುತ್ತಲಿನವರ ಮಾತು ನಮ್ಮ ಗುರಿಗೆ ಪೂರಕವಾಗಿದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕು. ಬದುಕಿನ ಮೌಲ್ಯಗಳನ್ನು ಅರಿತು ಮುನ್ನಡೆಯುವ ಸಂದರ್ಭದಲ್ಲಿ ಹಿರಿಯರು ಪ್ರಾಮಾಣಿಕವಾಗಿ ನೀಡುವ ಉಪದೇಶಗಳನ್ನು ಸ್ವೀಕರಿಸಬೇಕು. ಆಗ ನಮ್ಮ ಗುರಿ ಸಾಲ್ಯ ಪಡೆಯುತ್ತದೆ. ನಾವು ಮಾಡುವ ಸತ್ಕಾರ್ಯದಲ್ಲಿ ಜೀವನದ ಸಾರ್ಥಕತೆ ಅಡಗಿರುತ್ತದೆ ಎಂದು ತಿಳಿಸಿದರು.