ಮಾನವೀಯ ನೆಲೆಗಟ್ಟಿಗೆ ಸ್ನೇಹ-ಸಂಬಂಧ ಸಹಕಾರಿ: ಕವಿತಾ ನಿಯಾತ್

22 sri 1
Published on

ಶೃಂಗೇರಿ: ಸ್ನೇಹ ಹಾಗೂ ಸಂಬಂಧಗಳು ಮಾನವೀಯ ನೆಲೆಗಟ್ಟನ್ನು ಭದ್ರಗೊಳಿಸಲು ಅತ್ಯಂತ ಸಹಕಾರಿ. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸದಸ್ಯರಲ್ಲಿ ಅವಿನಾಭಾವ ಸಂಬಂಧವಿದ್ದಾಗ ಮಾತ್ರ ಅಂತಹ ಸಂಸ್ಥೆಗಳು ಸರ್ವರಿಗೂ ಮಾದರಿ ಆಗುತ್ತದೆ ಎಂದು ಇನ್ನರ್‌ವ್ಹೀಲ್ ಸಂಸ್ಥೆ-318ರ ಜಿಲ್ಲಾಧ್ಯಕ್ಷೆ ಕವಿತಾ ನಿಯಾತ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಶೃಂಗೇರಿ ಇನ್ನರ್‌ವ್ಹೀಲ್ ಸಂಸ್ಥೆಯ ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಸೇವೆ ಬಯಸುವವರು ಸ್ವಹಿತಲಾಭ ಬದಿಗಿಟ್ಟು ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ದುಡಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.

ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸಂಸ್ಥೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ನಡೆಸಬೇಕಿದೆ. ಪ್ರಸ್ತುತ ಕಾನ್ಸರ್ ಕುರಿತು ಮಾಹಿತಿ ನೀಡುವ ಅವಶ್ಯಕತೆ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಕ್ಷೇತ್ರದಲ್ಲಿ ನೆರವು ನೀಡಲು ಸಂಸ್ಥೆ ಮುಂದಾಗಬೇಕು ಎಂದು ಹೇಳಿದರು.

ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಪ್ರಿಯದರ್ಶಿನಿ ಹೆಗಡೆ ಮಾತನಾಡಿದರು. ಸಂಸ್ಥೆಯ ಶೃಂಗಚಕ್ರ ಪುಸ್ತಕ ಬಿಡುಗಡೆಗೊಳಿಸಲಾಯಿತು. ಮೆಣಸೆ ಸರ್ಕಾರಿ ಶಾಲೆಯ ಪ್ರತಿ ತರಗತಿಗೆ ಧ್ವನಿವರ್ಧಕ ನೀಡಲಾಯಿತು. ಜಿಲ್ಲಾ ಕಾರ್ಯದರ್ಶಿ ವೈಶಾಲಿ ಕುಡ್ವ, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಡಾ. ಭುವನೇಶ್ವರಿ, ಕಾರ್ಯದರ್ಶಿ ಸುಜಾತಾ ನಟೇಶ್, ಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಸಿದ್ಧಪ್ಪ, ಕೋಶಾಧ್ಯಕ್ಷೆ ಸುಗಂಧಿನಿ ಕಾಡಪ್ಪ ಗೌಡ, ಪದಾಧಿಕಾರಿಗಳಾದ ಮಂಜುಳಾ ಸುಬ್ರಮಣ್ಯ, ರೋಟರಿ ಕಾರ್ಯದರ್ಶಿ ಡಾ.ನಾಗೇಶ್, ವಲಯ ಸೇನಾನಿ ಎಚ್.ಎಸ್.ಗಣೇಶ್, ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net