

ಅದರಂತೆ ಶಿಲ್ಪಿಯು ಮುಂಜಾನೆ ಎದ್ದು ನೇರವಾಗಿ ದೊಡ್ಡ ನರಸಪ್ಪನವರ ಬಳಿಗೆ ನಡೆದು ತಾನು ಕಣ್ಣು ಕಳೆದುಕೊಂಡಿದ್ದು, ತನ್ನ ಕನಸಿನಲ್ಲಿ ಬಂದು ರಾಯರಿತ್ತ ಆದೇಶಾದಿಗಳನ್ನು ಅವರೆದುರಿನಲ್ಲಿ ಬಿನ್ನಯಿಸಿಕೊಂಡನು. ಅಂತೆಯೇ ಶುಭದಿನದಂದು ಸ್ವಾಮಿರಾಯಾಚಾರ್ಯರು ಹಿಂದೆ ರಾಯರೇ ಸೂಚಿಸಿದ್ದ ಬಂಡೆಗೆ ಷೋಡಶೋಪಚಾರ ಪೂಜೆ ಸಲ್ಲಿಸಿದ ತರುವಾಯ ನಂಜಾಚಾರಿಯು ಗುರುರಾಯರನ್ನು ಸ್ಮರಿಸುತ್ತ ಎಡಗೈಯನ್ನು ಬಂಡೆಯ ಮೇಲಿಟ್ಟನು. ಆಶ್ಚರ್ಯವೆಂದರೆ ಆತನು ಬಂಡೆಯ ಮೇಲೆ ಉಳಿ ಇಟ್ಟಿರುವಷ್ಟು ಸ್ಥಳಮಾತ್ರ ಅವನಿಗೆ ಕಾಣಿಸುತ್ತಿದೆ. ಅದರ ಆಚೆ-ಈಚೆ ಏನೂ ಕಾಣಿಸುತ್ತಿಲ್ಲ. ಅದರ ಉಬ್ಬು ತಗ್ಗುಗಳೂ ಕಾಣುತ್ತಿರಲಿಲ್ಲ. ಉಳಿಯನ್ನು ಊರುತ್ತ ಮುಂದುವರಿದಂತೆ ಆಯಾ ಪ್ರದೇಶವು ಮಾತ್ರ ಅನುಭವಕ್ಕೆ ಬರುತ್ತಿದ್ದವು. ಇದರಿಂದ ರಾಯರೇ ಆತನ ಕೈ ಹಿಡಿದು ಸಮಗ್ರ ಬಂಡೆಯ ಮೇಲೆ ಹಿಡಿತ ಹೊಂದಿ ಬೃಂದಾವನವನ್ನು ಕೆತ್ತಿಸಿಕೊಂಡರು ಅಥವಾ ಸ್ವಯಂ ಕೆತ್ತನೆ ಮಾಡಿದರು ಎಂದು ತಿಳಿದುಬರುತ್ತದೆ. ಗುರುರಾಯರಿಗೆ ಶಿಲ್ಪಕಲೆಯಲ್ಲೂ ಎಂತಹ ನೈಪುಣ್ಯವಿತ್ತೆಂದು ಇಂದಿನ ಚನ್ನಗಿರಿಯ ರಮಣೀಯವಾದ ಬೃಂದಾವನವನ್ನು ನೋಡಿದರೆ ತಿಳಿದುಬರುತ್ತದೆ.
ಅಂತೂ ಇಂತೂ ನಂಜಾಚಾರಿಯು ಮಾರ್ಗಶಿರ ಮಾಸದ ಹೊತ್ತಿಗೆ ಬೃಂದಾವನದ ನಾಲ್ಕೂ ದಿಕ್ಕುಗಳ ಚೌಕಾಕಾರವನ್ನು ಸಿದ್ಧಪಡಿಸಿದನು. ಇನ್ನು ಜಲಹರಿಗಳಿಂದ ಕೂಡಿದ ಪೀಠಶಿಲೆ ಹಾಗೂ ಕೂರ್ವಸನ ಬಾಕಿಯಿತ್ತು. ಇತ್ತ ಸ್ವಾಮಿರಾಯಾಚಾರ್ಯರು ಇನ್ನಷ್ಟು ಹಿರಿಯರನ್ನು, ನಲ್ಲೂರಿನ, ಚನ್ನಗಿರಿಯ ಮುಖಂಡರನ್ನು, ಅನುಭಾವಿಗಳನ್ನು ಕರೆಸಿ ಬೃಂದಾವನ ಪ್ರತಿಷ್ಠಾಪನೆಗೆ ಬೇಕಾದ ತಯಾರಿಗಳ ಬಗ್ಗೆ ಸಭೆ ನಡೆಸಿದರು. ಅದರಲ್ಲಿ ಪುರಾಣದ ನಾರಾಯಣಾಚಾರ್ಯರು, ಸಣ್ಣ ತಮ್ಮಣ್ಣಾಚಾರ್ಯರು, ಕೃಷ್ಣ ಜೋಯಿಸರು ಮುಂತಾದ ಪ್ರಮುಖರು ಸೇರಿದ್ದರು. ಆಗ ಜ್ಯೋತಿರ್ವಿದ್ವಾನ್ ಕೃಷ್ಣಜೋಯಿಸರು ಸೂಚಿಸಿದಂತೆ ಎಲ್ಲರೂ ಅದೇ ವರ್ಷದ ಮಾಘ ಶುದ್ಧ ಪಂಚಮಿಯಂದು ಬೃಂದಾವನ ಪ್ರತಿಷ್ಠೆಯನ್ನು ಕೈಗೊಳ್ಳಲು ಒಮ್ಮತದಿಂದ ತೀರ್ವನಿಸಿದರು. ಇನ್ನು ಮಂಚಾಲೆಯಿಂದ ಮೃತ್ತಿಕೆಯನ್ನು ತರಬೇಕಾದ ಮಹತ್ತರ ಕಾರ್ಯವು ಬಾಕಿಯಿತ್ತು. ಅಂದಿನ ಕಾಲಕ್ಕೆ ವಾಹನದ ಸೌಕರ್ಯದ ವ್ಯವಸ್ಥೆ ಇರದಿದ್ದ ಕಾರಣ ಹಾಗೂ ಕಾಲ್ನಡಿಗೆಯಲ್ಲೇ ಮಡಿಯಿಂದ ಮೂಲಬೃಂದಾವನದಿಂದ ಅಲ್ಲಿನ ಯತಿವರ್ಯರ ಕರಕಮಲದಿಂದಲೇ ಮೃತ್ತಿಕೆಯನ್ನು ಪಡೆದು ತರಬೇಕಿದ್ದ ಕಾರಣ ಅದರ ಸೂಕ್ತ ವ್ಯವಸ್ಥೆಯ ಚಿಂತನೆ ನಡೆದಿತ್ತು.
ಸರಿಸುಮಾರು ಒಂದೂವರೆ-ಎರಡು ತಿಂಗಳುಗಳ ಕಾಲ ಆ ಕಾರ್ಯದಲ್ಲಿ ತಲ್ಲೀನರಾಗಬೇಕಿದ್ದ ಕಾರಣ ಹಿರಿಯರೆಲ್ಲ ವಯಸಾ ವೃದ್ಧರಾಗಿದ್ದರು. ಹೀಗಾಗಿ ಅಂದಿನ ರಾಯರ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವರದೇಂದ್ರತೀರ್ಥರಿಗೆ ಮೃತ್ತಿಕೆಯನ್ನು ಯಾಚಿಸುತ್ತ ಬಿನ್ನಹ ಪತ್ರ ಬರೆದು ಕೆಲ ಯುವ-ಉತ್ಸಾಹಿ- ನಿಷ್ಠಾವಂತ ಭಕ್ತರ ಮೂಲಕ ಕಳುಹಿಸಿಕೊಡಲು ಶ್ರೀ ಸ್ವಾಮಿರಾಯಾಚಾರ್ಯರು ಮುಂದಾದರು. ಆ ಬಿನ್ನಹಪತ್ರ ಇಂದಿಗೂ ರಾಯರ ಮೂಲಮಠದಲ್ಲೂ ಚನ್ನಗಿರಿಯಲ್ಲೂ ಒಂದೊಂದು ಪ್ರತಿಯಾಗಿ ದೊರೆಯುತ್ತದೆ. ಭಕ್ತಿಪೂರ್ಣವಾಗಿದ್ದ ಆ ಪತ್ರದ ವಿಚಾರವನ್ನು ಹಾಗೂ ಅಂಧ ನಂಜಾಚಾರಿಗೆ ರಾಯರು ನಿರ್ವಹಿಸಿದ ಕೈಂಕರ್ಯದ ಬಗ್ಗೆಯೂ ತಿಳಿದ ಶ್ರೀಪಾದರು ಸ್ವಯಂ ರಾಯರ ಮೃತ್ತಿಕೆಯನ್ನು ಒಂದು ಸಂಪುಟದಲ್ಲಿಟ್ಟು ಒಂದು ಸಪ್ತಕಪೂಜೆಯನ್ನು ನಡೆಸಿದರು. ಇತ್ತ ಮೃತ್ತಿಕೆ ತರಲು ಹೊರಟ ಭಕುತರೂ ಮಂಚಾಲೆಯಲ್ಲಿ ಶ್ರೀಪಾದರ ಆಜ್ಞೆಯಂತೆ ರಾಯರ ಮೂಲಬೃಂದಾವನವನ್ನು ಬಹುವಾಗಿ ಸೇವಿಸಿದರು. ಸ್ವಯಂ ಶ್ರೀವರದೇಂದ್ರತೀರ್ಥರೇ ಬಂದು ಚನ್ನಗಿರಿಯಲ್ಲಿ ರಾಯರ ಬೃಂದಾವನವನ್ನು ಪ್ರತಿಷ್ಠಾಪಿಸಬೇಕೆಂಬುದು ಊರಜನರ ಅಭಿಲಾಷೆಯಾಗಿತ್ತು.
ಹೀಗಾಗಿ ಮೃತ್ತಿಕೆಯನ್ನು ಭಕ್ತರ ಮೂಲಕ ಕಳುಹಿಸಿ ಶ್ರೀಪಾದರೂ ಮೇನೆಯಲ್ಲಿ ಹಿಂದೆಯೇ ಹೊರಟು ಬಂದು ಪುಷ್ಯ ಬಹುಳ ಚತುರ್ದಶಿಯಂದೇ ಚನ್ನಗಿರಿಯನ್ನು ಸೇರಿ ವೈಭವದ ಮೆರವಣಿಗೆಯಿಂದ ಸ್ವಾಗತಿಸಲ್ಪಟ್ಟರು. ಇತ್ತ ಮೃತ್ತಿಕೆಯೂ ಸಕಾಲಕ್ಕೆ ಆಗಮಿಸಲು ಶ್ರೀಪಾದರು ಹರ್ಷತುಂದಿಲರಾದರು. ನಂಜಾಚಾರಿಯ ದ್ವಾರಾ ರಾಯರು ಮಾಡಿಸಿಕೊಂಡ ಆ ದಿವ್ಯ ಬೃಂದಾವನವನ್ನು ಕಂಡ ಗುರುಗಳ ಕಣ್ಗಳು ಆನಂದದಿಂದ ತೇವೆಯಾದವು. ಶ್ರೀಪಾದರು ಮಾಘ ಶುದ್ಧ ಪಂಚಮಿಯಂದು ಶ್ರೀ ಮೂಲರಾಮದೇವರನ್ನು ಪೀಠದಲ್ಲೂ, ಬೃಂದಾವನದ ಮೇಲೂ ಇರಿಸಿ ವಿಶೇಷವಾಗಿ ಅರ್ಚಿಸಿ ಆರಾಧಿಸಿದರು. ಪುರೋಹಿತ ರಾಮಾಚಾರ್ಯರ ಅಧ್ಯಕ್ಷತೆಯಲ್ಲಿ ಶಾಸ್ತ್ರೀಯವಾಗಿ ಗುರುರಾಯರ ಬೃಂದಾವನವನ್ನು ಪ್ರತಿಷ್ಠಾಪಿಸಿ ಭಕುತರನ್ನು ಶ್ರೀಗಳು ಅನುಗ್ರಹಿಸಿದರು. ಇತ್ತ ನಂಜಾಚಾರಿಗೆ ರಾಯರೇ ಸ್ವಯಂ ಮಾತು ಕೊಟ್ಟಂತೆ ಯಥಾಪೂರ್ವದಂತೆ ದೃಷ್ಟಿಯು ಪುನಃ ಪ್ರಾಪ್ತವಾಯಿತು. ರಾಯರ ಕಾರುಣ್ಯ, ಸಂಕಲ್ಪಶಕ್ತಿಗೆ ಸಮಾನ ಎಲ್ಲಾದರೂ ಕಾಣಬಹುದೇ! ಸ್ವಯಂ ನಂಜಾಚಾರಿಯೇ ವೃಂದಾವನವನ್ನು ಕಂಡು ನಂಬಲಾರದೆ ಹೋದ. ರಾಯರ ಮಾಹಾತ್ಮ್ಯೆಗೆ ಇದಕ್ಕಿಂತ ನಿದರ್ಶನ ಬೇಕೆ?