

ಶೃಂಗೇರಿ: ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಜೀವನ್ಮರಣದ ನಡುವೆ ಹೋರಾಟ ಮಾಡುವವರಿಗೆ ರಕ್ತದಾನ ಮಾಡುವ ಮೂಲಕ ಬದುಕು ನೀಡಬೇಕು ಎಂದು ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಲಕ್ಷ್ಮೀನಾರಾಯಣ್ ತಿಳಿಸಿದರು.
ಅವರು ಭಾನುವಾರ ಕಾರ್ಮಿಕ ಮಿತ್ರ ಬಳಗ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ 32ನೇ ವರ್ಧಂತ್ಯುತ್ಸವದ ಪ್ರಯುಕ್ತ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡಿದ ವ್ಯಕ್ತಿಗೆ ಸಾಕಷ್ಟು ಪ್ರಯೋಜನಗಳಿವೆ. ದೇಹದಲ್ಲಿ ಹೊಸ ರಕ್ತದ ರಚನೆಗೆ ಸಹಕಾರಿಯಾಗುತ್ತದೆ. ರಕ್ತದೊತ್ತಡ, ಮಧುಮೇಹದಂತಹ ರೋಗಗಳನ್ನು ನಿಯಂತ್ರಿಸಲು ಸಹಾಯಕ. ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸಂಘದ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ಕಾರ್ಮಿಕ ಮಿತ್ರ ಬಳಗದ ಅಧ್ಯಕ್ಷ ರಮೇಶ್ ಶೂನ್ಯ, ಪದಾಧಿಕಾರಿಗಳಾದ ಆನಂದಸ್ವಾಮಿ, ಸತ್ಯನಾರಾಯಣ, ಜಗದೀಶ್, ಪ್ರಶಾಂತ್ ಗ್ರೆಬಿಯಲ್ ಡಿಸೋಜಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಅಧ್ಯಕ್ಷೆ ಜ್ಯೋತಿ ಮಂಜುನಾಥ್ ಇದ್ದರು.