

ಗಂಡಸಿ: 20 ಲಕ್ಷ ರೂ. ವೆಚ್ಚದಲ್ಲಿ ಹೋಬಳಿಯ ಕೊಂಡೆನಾಳು ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವರಿಗೆ ನೂತನವಾಗಿ ನಿರ್ಮಿಸಿರುವ ರಥದ ಲೋಕಾರ್ಪಣೆ ಮತ್ತು ಶ್ರೀ ರಾಮನವಮಿಯ ಜಾತ್ರಾ ಮಹೋತ್ಸವ ಶನಿವಾರ, ಭಾನುವಾರ ಎರಡು ದಿನಗಳವರೆಗೆ ಸಂಭ್ರಮ ಸಡಗರದಿಂದ ಜರುಗಿತು.
ಶನಿವಾರ ಸಂಜೆ ಗ್ರಾಮಕ್ಕೆ ಬಿದಿರಾಂಬಿಕಾ ದೇವಿಯವರ ಆಗಮನದೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಹೂವಿನ ಮಂಟಪದ ಮೇಲೆ ಶ್ರೀ ವೀರಾಂಜನೇಯಸ್ವಾಮಿ ಶ್ರೀ ಬಿದಿರಾಂಬಿಕಾ ದೇವಿಯನ್ನು ಕೂಡಿಸಿ ವಾದ್ಯಗೋಷ್ಠಿ, ವಿವಿಧ ಕಲಾತಂಡಗಳ ಕುಣಿತ, ಸೋಮನ ಕುಣಿತ, ಭಾರಿ ಮದ್ದು-ಗುಂಡಿನ ಪ್ರದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಭಾನುವಾರ ಬೆಳಗ್ಗೆ ಶ್ರೀ ವೀರಾಂಜನೇಯ ಸ್ವಾಮಿ ಅವರ ಮೂಲಸ್ಥಾನದ ವಿಗ್ರಹಕ್ಕೆ ಅಭಿಷೇಕ, ಹೋಮ, ವಿಶೇಷ ಪೂಜೆ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಿ ಮಧ್ಯಾಹ್ನ 2 ಗಂಟೆಗೆ ಶುಭ ಮುಹೂರ್ತದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಥಕ್ಕೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಶ್ರೀ ವೀರಾಂಜನೇಯ ಸ್ವಾಮಿಯನ್ನು ಕೂರಿಸಿದ ನಂತರ ಭಕ್ತರು ಜಯಘೋಷದೊಂದಿಗೆ ತೇರು ಎಳೆದು ಸಂಭ್ರಮಿಸಿದರು.
ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ಅನ್ನದಾಸೋಹ ಏರ್ಪಡಿಸಲಾಗಿತ್ತು.