ಶ್ರೀ ವೀರಭದ್ರಸ್ವಾಮಿ ರಥೋತ್ಸವ

ratha feb 19 2020
Published on

ಶ್ರೀಕ್ಷೇತ್ರ ರಾಯಚೋಟಿಯಲ್ಲಿ ಇದೇ ಫೆ. 26ರಂದು ಶ್ರೀ ವೀರಭದ್ರಸ್ವಾಮಿಯ ರಥೋತ್ಸವದ ದಶವಾರ್ಷಿಕೋತ್ಸವ ಜರುಗಲಿದೆ. ಇದರ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಲೇಖನವಿದು.

ಭಾರತೀಯರು ಭಗವಂತನೊಂದಿಗೆ ನಡೆಸುವ ಭಕ್ತಿಯ ಅನುಸಂಧಾನದ ಬದ್ಧತೆ ವಿಶ್ವತೋಮುಖವಾದ್ದು. ವಿಶಿಷ್ಟವಾಗಿ ಬೆಳೆದುಬಂದಿರುವ ಶಿವಸಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿದಿರುವ ಯುಗಪುರುಷ ಶ್ರೀ ವೀರಭದ್ರಸ್ವಾಮಿ. ಇಂದಿಗೂ ಆಚರಿಸಲಾಗುವ ಗುಗ್ಗಳ ಮಹೋತ್ಸವದಲ್ಲಿ ಉಗ್ಗಡಿಸುವ ವಡಬುಗಳ ವರ್ಣನೆಯಲ್ಲಿ ಶ್ರೀ ವೀರಭದ್ರಸ್ವಾಮಿಯು ಶಾಶ್ವತವಾಗಿದ್ದಾನೆ.

ಆಂಧ್ರಪ್ರದೇಶ ರಾಜ್ಯದ ಕಡಪಾ ಜಿಲ್ಲೆಯ ರಾಯಚೋಟಿ ಕ್ಷೇತ್ರದಲ್ಲಿ ಶ್ರೀ ವೀರಭದ್ರಸ್ವಾಮಿಯು ಶ್ರೀಮಾತೆ ಭದ್ರಕಾಳಿ ಸಮೇತ ನೆಲೆಸಿದ್ದಾನೆ. ಈ ಕ್ಷೇತ್ರದಲ್ಲಿರುವ ಪ್ರಶಾಂತ ವೀರಭದ್ರಸ್ವಾಮಿಯ ಅವತಾರವೇ ಭೂಲೋಕದ ಪ್ರಪ್ರಥಮ ಅವತಾರ ಎಂಬ ಪ್ರತೀತಿ ಇದೆ. ಇಲ್ಲಿಂದಲೇ ಭಾರತದಾದ್ಯಂತ ವೀರಭದ್ರಸ್ವಾಮಿಯ ವಿಗ್ರಹಗಳು ಪ್ರತಿಷ್ಠಾಪಿಸಲು ಪ್ರೇರಣೆ ದೊರೆತಿದೆ ಎಂದೂ ಹೇಳಲಾಗುತ್ತದೆ. ಭಾರತದ ನಾನಾ ರಾಜ್ಯಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಿದ್ದರೂ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಿಂದ ಅಸಂಖ್ಯ ಭಕ್ತಗಣ ಇಲ್ಲಿಗೆ ಆಗಮಿಸುತ್ತದೆ. ಉತ್ತರ ಕರ್ನಾಟಕದ ಸಾವಿರಾರು ಮನೆತನಗಳಿಗೆ ರಾಯಚೋಟಿ ವೀರಭದ್ರಸ್ವಾಮಿಯೇ ಕುಲದೈವ.

ಮೊದಲ ರಥೋತ್ಸವ: ರಾಯಚೋಟಿ ವೀರಭದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಿದರೂ ರಥೋತ್ಸವ ಇರಲಿಲ್ಲ. ಇದನ್ನು ಗಮನಿಸಿದ ಹುಬ್ಬಳ್ಳಿಯ ಭಕ್ತರು ಸ್ವಾಮಿಗೆ ಹೊಸದಾಗಿ ರಥ ನಿರ್ವಿುಸುವ ನಿರ್ಣಯ ಕೈಗೊಂಡರು. ಒಟ್ಟು 360 ಭಕ್ತರು ನೀಡಿದ ಸುಮಾರು 10.5 ಲಕ್ಷ ರೂ. ಭಕ್ತಿ ಕಾಣಿಕೆಯಿಂದ 2011ರಲ್ಲಿ ಹೊಸ ರಥ ನಿರ್ಮಾಣಗೊಂಡಿತು. ಹಾನಗಲ್ಲ ತಾಲೂಕು ಹೊಳೆಆಲೂರಿನ ರೇವಣಸಿದ್ಧಪ್ಪ ಬಡಿಗೇರ ಹಾಗೂ ಅವರ ಮಕ್ಕಳು ಈ ಸುಂದರ ರಥದ ಶಿಲ್ಪಿಗಳು. ಆ ರಥದಲ್ಲಿ ಭದ್ರಕಾಳಿಸಮೇತ ವೀರಭದ್ರಸ್ವಾಮಿಯ ಮೊದಲ ರಥೋತ್ಸವ ಜರುಗಿತು. ಕೇದಾರ ವೈರಾಗ್ಯಪೀಠದ ಜಗದ್ಗುರು, ರಾವಲ್​ವಿಭೂಷಿತ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಮೊದಲ ರಥೋತ್ಸವವನ್ನು ಉದ್ಘಾಟಿಸಿದರು. ಗದಗ-ಬೆಟಗೇರಿಯ ಸುಮಾರು ಐವತ್ತು ಜನ ಸದ್ಭಕ್ತರು ಮೊದಲ ರಥೋತ್ಸವದಿಂದ ಇಂದಿನವರೆಗೂ ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ರಥೋತ್ಸವದ ಸಕಲ ಸಿದ್ಧತೆಗಳನ್ನು ಮಾಡುತ್ತಾರೆ. ರಥದ ಕಳಸವನ್ನು ಇಳಿಸುವ ತನಕ ಕ್ಷೇತ್ರದಲ್ಲಿದ್ದು ಎಲ್ಲ ಸೇವೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವರು.

ದಶಕದ ಸಂಭ್ರಮ: ಈ ಬಾರಿಯ ರಥೋತ್ಸವಕ್ಕೆ ದಶಕದ ಸಂಭ್ರಮ ಮೇಳೈಸಿದ್ದು, ವೈವಿಧ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಈ ಸಂಭ್ರಮ ಅಧಿಕಗೊಳ್ಳುವಂತೆ ಮಾಡಿದ್ದಾರೆ. ಫೆ. 25ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. 26ರಂದು ಶ್ರೀ ರಂಭಾಪುರಿ ಜಗದ್ಗುರುಗಳು ರಥ ದಶಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಸ್ವಾಮಿಯ ಪಾದಗಳ ಮೇಲೆ ಸೂರ್ಯರಶ್ಮಿ

ಪ್ರತಿವರ್ಷ ನಿರ್ದಿಷ್ಟ ದಿನಗಳಂದು ಸೂರ್ಯೋದಯದ ಸಂದರ್ಭದಲ್ಲಿ ಶ್ರೀ ವೀರಭದ್ರಸ್ವಾಮಿಯ ಪಾದಗಳ ಮೇಲೆ ಸೂರ್ಯರಶ್ಮಿಗಳು ಸೋಕುತ್ತವೆ. ಈ ವಿಶಿಷ್ಟ ದರ್ಶನಕ್ಕೆ ಪೂರಕವಾಗಿ ಸ್ವಾಮಿಯ ಭವ್ಯ ದೇಗುಲವನ್ನೂ ನಿರ್ವಿುಸಲಾಗಿದೆ.

ಡಾ. ಗುರುಪಾದಯ್ಯ ವೀ. ಸಾಲಿಮಠ ಸವಣೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net