

ಶಿರಸಿ: ಭಗವಂತನ ಉಪಾಸನೆಯಿಂದ ಅದ್ವಿತೀಯ ಪರಮಾತ್ಮ ತತ್ತ್ವವನ್ನು ಸಾಧಿಸಬಹುದು ಎಂಬ ವಿಶಿಷ್ಟ ಚಿಂತನೆಯನ್ನು ಪ್ರಪಂಚಕ್ಕೆ ನೀಡಿದವರು ಶ್ರೀ ಶಂಕರಭಗವತ್ಪಾದರು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಮಂಗಳವಾರ ಮಠದಲ್ಲಿ ಸರಳವಾಗಿ ಆಯೋಜಿಸಿದ್ದ ಶಂಕರ ಜಯಂತಿಯ ಸಂದೇಶ ನೀಡಿ, ಅವರವರ ಇಷ್ಟ ದೇವತೆಯನ್ನು ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಉಪಾಸನೆ ಮಾಡುವ ಮೂಲಕ ಎಲ್ಲರೂ ಕಟ್ಟಕಡೆಯಲ್ಲಿ ತಲುಪಬೇಕಾದದ್ದು ಒಂದೇ ಕಡೆ ಎಂಬುದನ್ನು ಶಂಕರರು ತೋರಿದ್ದಾರೆ. ಅನೇಕ ದೇವತೋಪಾಸನೆಯಲ್ಲಿ ಈ ಸಮನ್ವಯದ ದೃಷ್ಟಿ ಸನಾತನ ಧರ್ಮದ ಸಾರ, ಅದ್ವೈತ ಸಿದ್ಧಾಂತದ ಒಂದು ಪ್ರಮುಖ ಆದರ್ಶ ಎಂದು ಹೇಳಿದರು.
ಪ್ರಪಂಚದಾದ್ಯಂತ ಇಂದು ಕರೊನಾ ವೈರಸ್ ವಿರುದ್ಧ ಜನರು ಸಮರೋಪಾದಿಯಲ್ಲಿ ಹೋರಾಡುತ್ತಿದ್ದಾರೆ. ಪೊಲೀಸರು, ವೈದ್ಯರು ಹಾಗೂ ಅನೇಕ ಸಾಮಾಜಿಕ ಕಾರ್ಯಕರ್ತರು ಮನೆಯಿಂದ ಹೊರಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ, ಮನೆಯ ಒಳಗೆ ಇದ್ದುಕೊಂಡು, ಭಕ್ತಿ, ಶ್ರದ್ಧೆ, ಧರ್ವಚರಣೆಯ ಮೂಲಕ ಆಸ್ತಿಕರೆಲ್ಲರೂ ಭಗವಂತನನ್ನು ಪ್ರಾರ್ಥಿಸುತ್ತಿರುವುದನ್ನು ನೋಡುತ್ತಿದ್ದೇವೆ. ಈ ಭಕ್ತಿ, ಶ್ರದ್ಧೆಯೇ ಮೊದಲಾದ ಆಸ್ತಿಕತೆಗೆ ದಿವ್ಯ ಪ್ರೇರಣೆಯನ್ನು ನೀಡಿ ಸನಾತನ ಧರ್ಮವನ್ನು ಪುನಶ್ಚೇತನಗೊಳಿಸಿದ ಮಹಾತ್ಮರು ಶ್ರೀ ಶಂಕರಭಗವತ್ಪಾದರು. ಧರ್ಮದ ನೆಲೆ ದೃಢವಾಗಲು ಶಂಕರರ ಚಿಂತನೆ ಎಲ್ಲ ಆಸ್ತಿಕರ ಮನಸ್ಸಿನಲ್ಲಿ ದೃಢಗೊಳ್ಳಬೇಕು. ಸ್ವರ್ಣವಲ್ಲೀ ಗುರುಪರಂಪರೆ ಎಂಬ ಗಂಗೆಯು ಶಂಕರರ ಮೂಲಕ ಹಿಮಾಲಯದಿಂದ ಇಲ್ಲಿಯವರೆಗೆ ಹರಿದುಬಂದಿರುವುದು ಸ್ಮರಣಾರ್ಹ ಸಂಗತಿ ಎಂದು ಹೇಳಿದರು.