ಶ್ರೀ ಶಂಕರರು ಸನಾತನ ಸಂಸ್ಕೃತಿಯ ರೂವಾರಿ

Shankaracharya Jayanti
ಶಿವಮೊಗ್ಗದಲ್ಲಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಎಸ್.ಎನ್.ಚನ್ನಬಸಪ್ಪ, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಕೆ.ಸಿ.ನಟರಾಜ ಭಾಗವತ್, ಜಿ.ಎಸ್.ನಟೇಶ್, ಡಾ. ಪಿ.ನಾರಾಯಣ್, ಸಂದೇಶ್ ಉಪಾಧ್ಯ, ಎಚ್.ಉಮೇಶ್ ಇದ್ದರು.
Published on

ಶಿವಮೊಗ್ಗ: ಶ್ರೀ ಶಂಕರಾಚಾರ್ಯರು ಸದಾ ಪ್ರಾತಃಸ್ಮರಣೀಯರು. ದೇಶದ ಉದ್ದಗಲಕ್ಕೂ ಸಂಚರಿಸಿ ತತ್ವಗಳನ್ನು, ಸಂಸ್ಕೃತಿಯನ್ನು ಪಸರಿಸಿ ನಮ್ಮ ಪರಂಪರೆ, ನೆಲೆಗಟ್ಟನ್ನು ಭದ್ರಪಡಿಸಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀ ಶಂಕರಾಚಾರ್ಯ ಜಯಂತಿ ಉದ್ಘಾಟಿಸಿ ಮಾತನಾಡಿ, ಶಂಕರಾಚಾರ್ಯರ ಮಹತ್ವದ ಕಾರ್ಯದಿಂದ ಧರ್ಮ ಉಳಿದಿದೆ ಎಂದು ತಿಳಿಸಿದರು.

ದೇಶಾದ್ಯಂತ ಸಂಚರಿಸಿ ಜೀವನಕ್ಕೆ ಅಗತ್ಯವಾದ ತತ್ವಗಳನ್ನು ಉಪದೇಶಿಸಿದ್ದು, ನಾಲ್ಕು ಕಡೆ ಪೀಠ ಸ್ಥಾಪನೆ ಮಾಡಿರುವ ಅವರು ಶ್ರೇಷ್ಠ ಪರಂಪರೆಯ ರೂವಾರಿ. ನಾವೆಲ್ಲ ಸೇರಿ ಅವರ ಮಹತ್ಕಾರ್ಯಗಳನ್ನು ಮುಂದೆ ತೆಗೆದುಕೊಂಡು ಹೋಗಬೇಕು. ವಿಚಾರಗಳನ್ನು ಎಲ್ಲರಿಗೂ ತಿಳಿಸಬೇಕು ಎಂದರು.

ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಶಂಕರಾಚಾರ್ಯರು ಎಲ್ಲ ಸಮಾಜಕ್ಕೆ ಸೇರಿದ ದಾರ್ಶನಿಕರು. ಎಲ್ಲರೂ ಸೇರಿ ಜಯಂತಿ ಆಚರಣೆ ಮಾಡಬೇಕಿದೆ ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಮಾತನಾಡಿ, ಶಂಕರಾಚಾರ್ಯರು ರಾಷ್ಟ್ರಾದ್ಯಂತ ಪ್ರವಾಸ ಮಾಡಿ ನಾಲ್ಕು ದಿಕ್ಕಿನಲ್ಲಿ ಪೀಠ ಸ್ಥಾಪನೆ ಮಾಡಿದ್ದಾರೆ. 18ನೇ ಶತಮಾನದಲ್ಲಿ ಅವರು ಪ್ರತಿಪಾದಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಬ್ರಾಹ್ಮಣ ಸಮಾಜ ಎಲ್ಲರೊಂದಿಗೆ ಒಗ್ಗೂಡಿ ಮುನ್ನಡೆಯಬೇಕು ಎಂದು ತಿಳಿಸಿದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಶಿವಮೊಗ್ಗದ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಡಾ. ಪಿ.ನಾರಾಯಣ್, ಭಜನಾ ಪರಿಷತ್ ಅಧ್ಯಕ್ಷ ಸಂದೇಶ್ ಉಪಾಧ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ಜಾಗೃತಿ ಸಂದೇಶ ನೀಡಿದ ಆಚಾರ್ಯರು

ಶಂಕರಾಚಾರ್ಯರು ನಮ್ಮೆಲ್ಲರಿಗೆ ಜಾಗೃತಿ ಸಂದೇಶಗಳನ್ನು ನೀಡಿದ್ದಾರೆ. ಅತ್ಯಂತ ಸರಳವಾಗಿ ಜೀವನದ ತತ್ವಗಳು, ವಿಚಾರಗಳನ್ನು ತುಂಬಿ ಕಟ್ಟಿಕೊಟ್ಟಿದ್ದಾರೆ. ಚಿಕ್ಕವಯಸ್ಸಿನಲ್ಲೇ ದೇಶಾದ್ಯಂತ ಸಂಚರಿಸಿ ತತ್ವ ಬೋಧನೆ ಮಾಡಿದ್ದು, ಮಾನವ ಕುಲಕ್ಕಾಗಿ ಜೀವನ ತ್ಯಾಗ ಮಾಡಿದ್ದಾರೆ ಎಂದು ಪ್ರವಚನಕಾರ ಜಿ.ಎಸ್.ನಟೇಶ್ ಹೇಳಿದರು. ವಿಶೇಷ ಉಪನ್ಯಾಸ ನೀಡಿದ ಅವರು, ಮಾನವ ಬದುಕನ್ನು ಸುಂದರ, ಸಾರ್ಥಕಗೊಳಿಸಿಕೊಳ್ಳುವ ತತ್ವಗಳನ್ನು ಅವರು ನೀಡಿದ್ದಾರೆ. ಜೀವಾತ್ಮ, ಪರಮಾತ್ಮ ಒಂದೇ ಎಂದು ಆಚಾರ್ಯರು ಸೇರಿ ಎಲ್ಲ ದಾರ್ಶನಿಕರು ತಿಳಿಸಿದ್ದಾರೆ. ಜೀವಕ್ಕೆ ಪ್ರಾಧಾನ್ಯತೆ ನೀಡಬೇಕು. ಕ್ಷಣಿಕವಾದದ್ದನ್ನು ಬಿಡಬೇಕು. ಜೀವ, ಪರಮಾತ್ಮ ಬೇರೆಯಲ್ಲ ಎಂಬ ಅವರ ತತ್ವಗಳನ್ನು ನಾವು ಅರಿತುಕೊಳ್ಳಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net