

ಪ್ರಪಂಚದ ಇತಿಹಾಸದಲ್ಲಿ ಭರತವರ್ಷ ಅತ್ಯಂತ ಪುರಾತನ-ಪವಿತ್ರ ಪುಣ್ಯಭೂಮಿಯಾಗಿ ತನ್ನ ಮಹತ್ವವನ್ನು ಸಾರಿಕೊಂಡಿದೆ. ವೇದಾಗಮಗಳ ಕಾಲದಿಂದಲೂ ಈ ದೇಶದಲ್ಲಿ ಶ್ರೇಷ್ಠವಾದ ಧರ್ಮ-ಸಂಸ್ಕೃತಿ-ಪರಂಪರೆ ಬೆಳೆದುಬಂದಿದೆ. ಬಿಡಿಸಲಾಗದ ಒಗಟಿನಂತಿರುವ ಈ ಬದುಕಿನ ಅರ್ಥವನ್ನು ಶೋಧಿಸುವುದರೊಂದಿಗೆ, ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ಮಾರ್ಗವೇ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.
ಭಾರತೀಯ ಸಂಸ್ಕೃತಿ, ಕಾಲ-ದೇಶಗಳ ಎಲ್ಲ ಪೆಟ್ಟುಗಳನ್ನು ಸಹಿಸಿಕೊಂಡು ಅನಂತವಾಗಿ ಸಾಗಿ ಬಂದ ಸಾಹಸಿಯಾಗಿದೆ. ಆಂತರಿಕ ಕಲಹ, ವಿದೇಶಿಯರ ಆಕ್ರಮಣ, ಮತ-ಧರ್ಮಗಳ ಸಂಘರ್ಷ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವಿಜ್ಞಾನ-ತಂತ್ರಜ್ಞಾನಗಳ ಬಲ ಇವೆಲ್ಲವುಗಳನ್ನೂ ಎದುರಿಸಿ ಮುಂದೆ-ಮುಂದೆ ಸಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಇಲ್ಲಿನ ಮಾನವೀಯತೆಯ ಶ್ರೇಷ್ಠ ತತ್ವಾದರ್ಶಗಳು ಮತ್ತು ಅವುಗಳನ್ನು ಅನುಸರಿಸಿ ಬದುಕಿದ ಪುಣ್ಯಪುರುಷರ ಯಶೋಗಾಥೆಗಳು. ಇವು ನಮ್ಮ ಸಂಸ್ಕೃತಿಯ ಸಾರವಾಗಿವೆ.
ಇಂಥ ಶ್ರೇಷ್ಠ ಸಂಸ್ಕೃತಿಯ ಹೆಮ್ಮೆಯ ಮಹಾಪುರುಷ ಶ್ರೀರಾಮ. ಇವನನ್ನು ಭಾರತೀಯ ಸನಾತನ ಚಿಂತನೆಗಳು ಪುರುಷೋತ್ತಮ ಎಂದು ಸಂಬೋಧಿಸುವ ಮುಖೇನ ಅವನ ವ್ಯಕ್ತಿತ್ವ ಮತ್ತು ತತ್ವಾದರ್ಶಗಳನ್ನು ಅನಾವರಣಗೊಳಿಸಿವೆ. ಇಂದಿಗೂ ಅವುಗಳನ್ನು ಶಾಶ್ವತವಾಗಿ ಇರಿಸಿಕೊಂಡಿವೆ. ಶ್ರೀರಾಮನು ಆದರ್ಶ ಸುಪುತ್ರ, ವಾತ್ಸಲ್ಯದ ಸಹೋದರ, ಪರಿಶುದ್ಧಪತಿ ಹಾಗೂ ಪ್ರಾಮಾಣಿಕ ಪ್ರಭುವಾಗಿ ಬದುಕುವ ಪರಿಯನ್ನು ತೋರಿಸಿದ ಮಹಾಪುರುಷನಾಗಿದ್ದಾನೆ. ಅನಾಥ ರಕ್ಷಣೆ, ದುಷ್ಟರ ಸಂಹಾರ, ಧರ್ವನುಸರಣೆ, ಸತ್ಯಸಂಧತೆ, ಪಿತೃವಾಕ್ಯ ಪರಿಪಾಲನೆ, ಸಹನಶೀಲತೆ, ಧೈರ್ಯ, ದಯಾಭಾವನೆ, ಸ್ನೇಹಪರತೆ ಮುಂತಾದ ಮಾನವೀಯ ಮೌಲ್ಯಗಳನ್ನು ತನ್ನ ಬದುಕಿನಲ್ಲಿ ನಿರೂಪಿಸಿಕೊಂಡ ರೀತಿ ಅಷ್ಟೇ ಅನನ್ಯವಾಗಿದೆ.
ಅಧರ್ಮ, ಅನ್ಯಾಯ, ಅಸತ್ಯವನ್ನು ಹಿಮ್ಮೆಟ್ಟಿಸುವ ಮುಖೇನ ಧರ್ಮ-ನ್ಯಾಯ-ಸತ್ಯಕ್ಕೆ ಜಯತಂದು ಕೊಟ್ಟಿದ್ದಾನೆ. ಸದೃಢ ಸಮಾಜ, ರಾಷ್ಟ್ರ, ವಿಶ್ವಸಮುದಾಯವನ್ನು ಮಾನವೀಯತೆಯ ತಳಹದಿಯ ಮೇಲೆ ನಿರ್ವಿುಸಲು ರಾಮರಾಜ್ಯದ ಕಲ್ಪನೆಯನ್ನು ಸಹ ಕಟ್ಟಿಕೊಟ್ಟಿದ್ದಾನೆ. ಇಂಥ ಬಹುಮುಖಿ ವ್ಯಕ್ತಿತ್ವದ, ಶ್ರೇಷ್ಠ ತತ್ವಾದರ್ಶಗಳ ಪ್ರತೀಕವಾದ ಶ್ರೀರಾಮನ ಬದುಕಿನ ಚಿತ್ರಣವನ್ನು ತಲರ್ಸ³ಯಾಗಿ ರಚಿಸಿದ ವಾಲ್ಮೀಕಿ ರಾಮಾಯಣ ಇಂದಿಗೂ ಪ್ರೇರಣಾದಾಯಿಯಾಗಿದೆ. ನೆಲಮೂಲ ಸಂಸ್ಕೃತಿಯ ಬೇಡನೊಬ್ಬ ರಾಮನಾಮ ಜಪದಿಂದ ತನ್ನ ಪ್ರತಿಭೆ-ಪಾಂಡಿತ್ಯವನ್ನು ಅರಳಿಸಿಕೊಂಡು ಇಡೀ ಜಗತ್ತಿಗೆ ರಾಮಾಯಣ ಎಂಬ ಮೊದಲ ಮಹಾಕಾವ್ಯವನ್ನು ನೀಡಿ, ‘ಆದಿಕವಿ’ ಎಂಬ ಬಿರುದಿಗೆ ಭಾಜನವಾಗಿದ್ದು ಸಹ ಈ ದೇಶದ ಹೆಮ್ಮೆಯ ಕಾಣಿಕೆಯಾಗಿದೆ.
ಶ್ರೀರಾಮನು ತನ್ನ ಪರಮಾಪ್ತನಾದ ವಾನರನನ್ನು ದೈವತ್ವದ ಸ್ಥಾನಕ್ಕೇರಿಸಿ ಶ್ರೀಮಾರುತಿಯನ್ನಾಗಿ ಗೌರವಿಸಿ ಈ ನಾಡು ಅವನನ್ನು ಪೂಜಿಸುವಂತೆ ಮಾಡಿದ್ದು, ರಾಮನ ಜೀವಪರತೆಯನ್ನು ಪ್ರತಿಬಿಂಬಿಸುತ್ತದೆ. ತಾನು ಗೆದ್ದ ರಾಜ್ಯವನ್ನು ವಿಭೀಷಣನಿಗೆ ನೀಡಿ ಅವನಿಗೆ ಪ್ರಭುವಿನ ಪಟ್ಟವನ್ನು ಅನುಗ್ರಹಿಸಿದ ಇವನ ಔದಾರ್ಯ, ತ್ಯಾಗ ಮೆಚ್ಚುವಂಥದ್ದು.
ರಾವಣನ ಮರಣದ ನಂತರ ಸಂಪತ್ಭರಿತವಾದ ಶ್ರೀಲಂಕೆಯನ್ನು ಪ್ರವೇಶಿಸಿದ ರಾಮಸೇವಕರು, ‘ಇದು ಅಯೋಧ್ಯೆಗಿಂತಲೂ ಶ್ರೀಮಂತವಾಗಿದೆ. ನಾವು ಇಲ್ಲಿಯೇ ಜೀವಿಸಬೇಕು’ ಎಂಬ ಮಾತುಗಳಿಗೆ ಶ್ರೀರಾಮನ ಉತ್ತರ ನಿಜಕ್ಕೂ ಹೃದಯರ್ಸ³ಯಾಗಿ, ಇಂದಿಗೂ ತನ್ನ ಮಹತ್ವವನ್ನು ಹೆಚ್ಚಿಸಿಕೊಂಡಿದೆ. ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಶ್ಲೋಕ, ‘ತಾಯಿ ಮತ್ತು ಜನಿಸಿದ ಸ್ಥಳ ಸ್ವರ್ಗಕ್ಕಿಂತ ಶ್ರೇಷ್ಠ’ ಎಂಬ ವ್ಯಾಖ್ಯಾನ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.
ಶಬರಿಯ ಭಕ್ತಿಗೆ ಮೆಚ್ಚಿದ ಶ್ರೀರಾಮ ತನ್ನ ತಾಯಿಯಂತೆ ಶಬರಿಯನ್ನು ಗೌರವಿಸಿದ್ದಾನೆ. ಇದು ಅವನ ಔದಾರ್ಯದ ಗುಣವೈಶಾಲ್ಯವನ್ನು ಪ್ರತಿಪಾದಿಸುತ್ತದೆ. ಹರಿ-ಹರನ ಭಾವೈಕ್ಯತೆಯ ಶಕ್ತಿಯಾಗಿರುವ ಶ್ರೀರಾಮನನ್ನು ಎಲ್ಲ ಮತ-ಪಂಥ-ವರ್ಗದವರು ಬೇಧ-ಭಾವವಿಲ್ಲದೆ ಪೂಜಿಸುತ್ತಾರೆ.
ಇಂಥ ಅಪ್ರತಿಮ ವ್ಯಕ್ತಿತ್ವದ ಶ್ರೀರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಯಾವ ಅಪಸ್ವರ, ಸ್ವ-ಹಿತಾಸಕ್ತಿ ಹಾಗೂ ಪೂರ್ವಗ್ರಹದ ಭಾವನೆ ಇರಬಾರದು. ಸುಪ್ರೀಂ ಕೋರ್ಟ್ ನೀಡಿರುವ ಮಹಾತೀರ್ಪನ್ನು ಎಲ್ಲರೂ ಗೌರವಿಸುವುದು ಆದ್ಯಕರ್ತವ್ಯವಾಗಿದೆ. ಈ ದೇಶದ ಇತಿಹಾಸ ಮತ್ತು ಚಾರಿತ್ರಿಕ ಸಂಗತಿಗಳ ಸಾವಿರಾರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ವಿಮಶಿಸಿ, ತೌಲನಿಕವಾಗಿ ಅಭ್ಯಸಿಸಿ ಸರ್ವರಿಗೂ ಒಳಿತಾಗುವ ತೀರ್ಪನ್ನು ನೀಡಿದ ಈ ದೇಶದ ಕಾನೂನು ವ್ಯವಸ್ಥೆಯನ್ನು ಎಲ್ಲರೂ ಒಪ್ಪಿ ಮೆಚ್ಚುಗೆ ವ್ಯಕ್ತಪಡಿಸುವುದು ನಮ್ಮ ಧರ್ಮವಾಗಿದೆ.
ಶ್ರೀರಾಮನ ವ್ಯಕ್ತಿತ್ವವನ್ನು ಕಾಲ, ದೇಶ, ಧರ್ವತೀತವಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಅವನ ಸಮಷ್ಠಿ ತತ್ವದ ಭಾವ ಎಲ್ಲರಲ್ಲಿ ಬಹು ಎತ್ತರಕ್ಕೆ ಬೆಳೆಯಬೇಕು. ಆಗ ಮಾತ್ರ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳುತ್ತದೆ. ಶ್ರೀ ರೇಣುಕಾದಿ ಪಂಚಾಚಾರ್ಯರು ಹಾಗೂ ಬಸವಾದಿ ಶರಣರ, ಮಾನವ ಧರ್ಮಕ್ಕೆ ಜಯವಾಗುತ್ತದೆ. ಧರ್ಮದಿಂದ ವಿಶ್ವಕ್ಕೆ ಶಾಂತಿ ಲಭಿಸುತ್ತದೆ. ಹಾಗೇ ದಯೆ ಧರ್ಮವಾಗುತ್ತದೆ. ಸಕಲ ಜೀವಾತ್ಮರಿಗೆ ಸದಾ ಲೇಸಾಗುತ್ತದೆ.
ಉನ್ನತವಾದ ಭಾರತೀಯ ಚಿಂತನೆಗಳನ್ನು ಈ ಜಗತ್ತಿಗೆ ಸಾರುವುದು ಅತೀ ಮುಖ್ಯವಾಗಿದೆ. ಹಾಗೇ ಅಕೃತ್ಯ, ಅಧರ್ಮ, ಅನೀತಿಗಳಿಂದ ಕೂಡಿದ ಕೆಡುಕನ್ನು ನಾಶಮಾಡುವುದು ಅಷ್ಟೇ ಸತ್ಯವಾಗಿದೆ. ಮರ್ಯಾದಾ ಪುರುಷೋತ್ತಮ ಎನ್ನುವ ರಾಮನ ವಿಶೇಷನಾಮಕ್ಕೆ ಗೌರವ ನೀಡುವ ಮುಖೇನ ಭ್ರಾತೃತ್ವ ಭಾವನೆಗಳನ್ನು ಬಲಿಷ್ಠಗೊಳಿಸಬೇಕು.
ಈ ದಿಸೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ದೇಶದ ಧರ್ಮ-ಸಂಸ್ಕೃತಿ, ಪರಂಪರೆ-ಪ್ರಗತಿಪರತೆಯ ದ್ಯೋತಕವೆಂದು ಭಾವಿಸಬೇಕು. ಸಂತೋಷ, ಸಂಭ್ರಮ-ಸಡಗರಗಳಿಂದ ಆ ಅಮೃತಗಳಿಗೆಯನ್ನು ಆಸ್ವಾದಿಸಿ ಆಚರಿಸುವುದರೊಂದಿಗೆ ಈ ದೇಶದ ಅಸ್ಮಿತೆಯನ್ನು ಎಲ್ಲ ಕಡೆಗೂ ಪಸರಿಸೋಣ.