

ಶಿವಮೊಗ್ಗ: ಅಯೋಧ್ಯೆಯಲ್ಲಿ ಜ.22ರಂದು ಹಮ್ಮಿಕೊಂಡಿರುವ ಶ್ರೀರಾಮ ಪ್ರತಿಷ್ಠಾಪನಾ ಸಮಾರಂಭ ನಿಮಿತ್ತ ಜಿಲ್ಲಾದ್ಯಂತ ಸೋಮವಾರ ವಿಶೇಷ ಪೂಜೆ, ಪುನಸ್ಕಾರ ಸೇರಿ ನಾನಾ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಐದು ಶತಮಾನದ ಹೋರಾಟದ ಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದ್ದು ಈಗಾಗಲೇ ಶ್ರೀರಾಮನಾಮ ಜಪಯಜ್ಞ ಸಮಿತಿಯಿಂದ ಶ್ರೀರಾಮ ಜಪ, ಧ್ಯಾನ ಭಜನೆ, ಆರಾಧನೆ ಹಾಗೂ ಶಾಲಾ, ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. 108 ಬಾರಿ ಶ್ರೀರಾಮ ಜಯರಾಮ ಜಯ ಜಯ ರಾಮ ಮಹಾಮಂತ್ರ ಪಠಣ, ಕರಪತ್ರ ವಿತರಣೆ ಮಾಡಲಾಗಿತ್ತು. ಶಾಲಾ, ಕಾಲೇಜುಗಳಲ್ಲಿ ಶ್ರೀರಾಮನ ಕುರಿತಂತೆ ರಸಪ್ರಶ್ನೆ, ಭಕ್ತಿ ಗೀತೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಭಜನಾ ಸ್ಪರ್ಧೆ ನಡೆಸಿದ್ದು ಇದೀಗ ಜ.22ರಂದೂ ಜಿಲ್ಲೆಯ ನೂರಾರು ಗ್ರಾಮಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆಯಿಂದ ಪೂಜೆ, ಹೋಮ, ಹವನಗಳನ್ನು ಮಾಡಿಸಲು ದೇವಸ್ಥಾನಗಳ ಕಮಿಟಿಯರು, ಗ್ರಾಮಸ್ಥರು ತಯಾರಿ ಮಾಡಿಕೊಂಡಿದ್ದು ಬೆಳಗ್ಗೆಯಿಂದ ರಾಮನಾಮ ಜಪ ಮೊಳಗಲಿದೆ. ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜ.22ರಂದು ಬೆಳಗ್ಗೆ 10ರಿಂದ ಲೋಕಕಲ್ಯಾಣಾರ್ಥ ಶ್ರೀರಾಮ ಪೂಜೆ, ಭಜನೆ, ಮೂಲರಾಮಯಣ ಪಾರಾಯಣ, ರಾಮತಾರಕ ಮಂತ್ರ ಜಪ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಲಿವೆ. ಅಚಿಂತ್ಯಾ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ಕೂಡ ಇರಲಿದೆ.
ಜೈಲ್ ವೃತ್ತದಲ್ಲಿ ಪಾನಕ ವಿತರಣೆ: ನಗರದ ಜೈಲ್ ಸರ್ಕಲ್‌ನಲ್ಲಿ ಎಂಎಲ್‌ಸಿ ಎಸ್.ರುದ್ರೇಗೌಡರ ಅಭಿಮಾನಿ ಬಳಗ, ರಸ್ತೆ ಬದಿ ವ್ಯಾಪಾರಿಗಳ ಸಂಘ ಹಾಗೂ ಗ್ಯಾರೇಜ್ ವಿಜಿ ಅಭಿಮಾನಿಗಳ ಸಂಘದ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಪಾನಕ ಮತ್ತು ಕೋಸಂಬರಿ ವಿತರಣಾ ಕಾರ್ಯಕ್ರಮ ಜ.22ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಬಿಲ್ಗುಣಿಯಲ್ಲಿ ಮಹಿಳೆಯರಿಂದ ಭಜನೆ: ಶಿವಮೊಗ್ಗ ತಾಲೂಕಿನ ಬಿಲ್ಗುಣಿ ಗ್ರಾಮದ ಶ್ರೀ ಆಂಜನೇಯ ಮತ್ತು ರಾಮೇಶ್ವರ (ಈಶ್ವರ) ದೇವಸ್ಥಾನದಲ್ಲಿ ಜ.22ರಂದು ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ಗ್ರಾಮದ ಮಹಿಳೆಯರಿಂದ ಭಜನೆ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
5 ಸಾವಿರ ಲಡ್ಡು ವಿತರಣೆ: ಅಯೋಧ್ಯೆಯ ರಾಮನ ಪ್ರತಿಷ್ಠಾಪನ ಅಂಗವಾಗಿ ಶಿವಮೊಗ್ಗದಲ್ಲಿ ವಿವಿಧಡೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ವಿನೋಬನಗರದ ಸವಿ ಬೇಕರಿಯ ಹಿಂಭಾಗ ರಾಮ ಭಕ್ತ ಶ್ರೀಧರ್ ಭಟ್ಟ ಅವರು 5 ಸಾವಿರ ಲಡ್ಡುಗಳನ್ನು ವಿತರಿಸಲಿದ್ದಾರೆ. ಭಾನುವಾರ ಸಂಜೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಮ ಭಕ್ತರ ಮನೆಗೆ ತೆರಳಿ ಪರಿಶೀಲಿಸಿದರು.