

ಕಡೂರು: ಹುಟ್ಟಿದ ಕಮಲ ಆಕಾಶ ಮೆಟ್ಟಿತು. ಮಳೆ-ಬೆಳೆ ಸಂಪಾಯಿತಲೇ ಪರಾಕ್… ಇದು ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದಯ್ಯ ಮಂಜು ಅವರ ಬಾಯಿಂದ ಬಂದಂತಹ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳು.
ತಾಲೂಕಿನ ಜಿಗಣೇಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಭಾರತ್ ಹುಣ್ಣಿಮೆಯ ಅಂಗವಾಗಿ ನಡೆದ ಕಾರ್ಣಿಕ ಮಹೋತ್ಸವ ಶನಿವಾರ ಗ್ರಾಮದ ಹೊರವಲಯದಲ್ಲಿನ ವೇದಾನದಿ ತಡದಲ್ಲಿ ಜರುಗಿತು.
ಪ್ರತಿವರ್ಷದಂತೆ ಭಾರತ್ ಹುಣ್ಣಿಮೆಯಂದು ಕಾರ್ಣಿಕ ಮಹೋತ್ಸವ ನಡೆಸಲಾಗುತ್ತದೆ. ಕಾರ್ಣಿಕದ ದೈವ ಮೈಲಾರಲಿಂಗಸ್ವಾಮಿಯವರ ಉತ್ಸವ ಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿನ ವೇದಾನದಿ ತಡದ ಬಳಿ ಆಂಜನೇಯ ಸ್ವಾಮಿ, ಚಿಕ್ಕಮ್ಮದೇವಿ ಗ್ರಾಮ ದೇವತೆಗಳು ಆಗಮಿಸಿದವು. ಬೆಳಗ್ಗೆ ಹೊಳೆ ಪೂಜೆ, ಅಭಿಷೇಕ, ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದ ನಂತರ ವಗ್ಗಯ್ಯಗಳ ಮತ್ತು ವಂದೊತ್ತಿನವರ ಆಯ್ಕೆ ಮತ್ತು ದೋಣಿ ಸೇವೆ ನಡೆಸಲಾಯಿತು.
ಮೈಲಾರಲಿಂಗಸ್ವಾಮಿಯ ಕಾರ್ಣಿಕದಯ್ಯ ಗಣಮಗ ಮಂಜು ಗೊರವಪ್ಪ ಉತ್ಸವದಲ್ಲಿ ಬಂದು ಎಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನು ಏರಿ ಹುಟ್ಟಿದ ಕಮಲ ಆಕಾಶ ಮೆಟ್ಟಿತು. ಮಳೆ-ಬೆಳೆ ಸಂಪಾಯಿತಲೇ ಪರಾಕ್ ಎಂದು ನುಡಿಯುವ ಮೂಲಕ ಬಿಲ್ಲಪ್ಪನಿಂದ ಜಾರಿ ತಮ್ಮ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು.
ಸ್ಥಳದಲ್ಲಿದ್ದ ಗೊರವರು ಗಂಟೆ ಮತ್ತು ಡಮರುಗಳ ಸಪ್ಪಳದೊಂದಿಗೆ ಏಳು ಕೋಟಿಗೆ ಪರಾಕ್ ಎನ್ನುವ ಸದ್ದು ಮಾರ್ದನಿಸಿತು. ನೆರದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ಕಾರ್ಣಿಕದ ನುಡಿಮುತ್ತುಗಳನ್ನು ಆಲಿಸಿ ಮುಂದಿನ ರಾಜಕೀಯ ಮತ್ತು ಕೃಷಿ ಚಟುವಟಿಕೆಗಳ ಕುರಿತು ವಿಶ್ಲೇಷಿಸಿದರು.
ಕಾರ್ಣಿಕ ಮಹೋತ್ಸವ ಮುಗಿದ ನಂತರ ದೇವರುಗಳನ್ನ ಜಿಗಣೇಹಳ್ಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನಗಾಡಿಗಳಿಗೆ ವಿಶೇಷ ಅಲಂಕಾರ ಮಾಡಿಕೊಂಡ ಭಕ್ತರು ಕಾರ್ಣಿಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಾಲಯದಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.