ಸಂಕೇಶ್ವರರಿಗೆ ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿ

vijay sankeshwar sir
Published on

ಧಾರವಾಡ: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಮದಥಣಿ ಮುರುಘೕಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ, ಪ್ರವಚನ, ಗ್ರಂಥಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಜ.26ರಿಂದ 30ರವರೆಗೆ ಮುರುಘಾಮಠದ ಶಿವಾನುಭವ ಮಂಟಪದಲ್ಲಿ ನಡೆಯಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜ.26ರಂದು ಬೆಳಗ್ಗೆ 8.30ಕ್ಕೆ ಗರಗ ಮಡಿವಾಳೇಶ್ವರ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಐದು ದಿನಗಳ ಕಾಲ ಪುಸ್ತಕಗಳ ಲೋಕಾರ್ಪಣೆೆ, ವಿಶೇಷ ಉಪನ್ಯಾಸ, ಪುರಸ್ಕಾರ ಪ್ರದಾನ ಸಮಾರಂಭ, ರಥೋತ್ಸವ ಸೇರಿ ನಾನಾ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಹರಗುರು ಚರಮೂರ್ತಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಜ.29ರ ಸಂಜೆ 6.30ಕ್ಕೆ ನಡೆಯುವ ಸಮಾರಂಭದಲ್ಲಿ ಶ್ರೀ ಮೃತ್ಯುಂಜಯ- ಮಹಾಂತ ಪ್ರಶಸ್ತಿಯನ್ನು ಡಾ.ವಿಜಯ ಸಂಕೇಶ್ವರ ಅವರಿಗೆ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡುವರು. ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಮಹಾಂತ ದೇವರು ಆಶಯ ನುಡಿಗಳನ್ನಾಡುವರು. ಡಿಸಿಎಂ ಲಕ್ಷ್ಮಣ ಸವದಿ ಅತಿಥಿಯಾಗಿ ಆಗಮಿಸುವರು. ಸಂಚಾರ ಠಾಣೆ ಇನ್​ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ವಚನಾನಂದಶ್ರೀ ನಡೆ ಸರಿಯಲ್ಲ

ವಚನಾನಂದ ಸ್ವಾಮೀಜಿ ಸಾರ್ವಜನಿಕ ವೇದಿಕೆಯಲ್ಲೇ ಸಮಾಜದ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡಿರುವ ಕ್ರಮ ಸರಿಯಾದುದಲ್ಲ ಎಂದು ಮುರುಘಾಮಠದ ಶ್ರೀಗಳು ಹೇಳಿದರು. ಮುಖ್ಯಮಂತ್ರಿಗೆ ಗೌರವ ನೀಡಿ ನಡೆದುಕೊಳ್ಳಬೇಕಿದ್ದ ಸ್ವಾಮೀಜಿ ನಡೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಸಮಾಜದ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಹೇಳುವ ಅಭಿಲಾಷೆ ಇದ್ದರೆ, ನಾಲ್ಕು ಗೋಡೆಗಳ ಮಧ್ಯೆ ಹೇಳಬೇಕಿತ್ತು; ಬಹಿರಂಗವಾಗಿ ಹೇಳಿದ್ದು ಸರಿಯಾದ ಕ್ರಮವಲ್ಲ ಎಂದರು. ಸಾರ್ವಜನಿಕ ಸಮಾರಂಭದಲ್ಲಿ ಸೇರಿದ್ದ 10-20 ಸಾವಿರ ಜನರ ಎದುರು ಈ ರೀತಿ ಮಾಡಿದ್ದು ಸೂಕ್ತ ಎನಿಸಿಲ್ಲ. ಅಲ್ಲಿ ಪಂಚಮಸಾಲಿ ಸಮಾಜದವರು ಮಾತ್ರವಲ್ಲದೆ, ಎಲ್ಲ ಸಮಾಜದ ಜನರೂ ಸೇರಿದ್ದರು. ನಮ್ಮದನ್ನು ನಾವೇ ಹೇಳಿಕೊಳ್ಳಬಾರದಿತ್ತು. ಅದು ಹೇಳುವ ಶೈಲಿಯೂ ಆಗಿರಲಿಲ್ಲ. ಸಿಎಂಗೆ ಅಧಿಕಾರ ವಾಣಿಯಿಂದ ಹೇಳುವ ಕ್ರಮವೂ ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net