ಲಂಕಾ, ಪಾಕ್ ದಿವಾಳಿ ನೆರವೀಯದ ಚೀನಾ

dfgdfgdg
Published on
ಶ್ರೀಲಂಕಾ ಮತ್ತು ಪಾಕಿಸ್ತಾನ ಬಹುತೇಕ ಪಾಪರ್ ಆಗಿವೆ. ವಿದೇಶಿ ಸಾಲ ಮರುಪಾವತಿಗೆ ತನ್ನ ಬಳಿ ದುಡ್ಡಿಲ್ಲ ಎಂದು ಶ್ರೀಲಂಕಾ ಸರ್ಕಾರ ಇತ್ತೀಚೆಗೆ ಸಾರ್ವಜನಿಕವಾಗಿ ಘೋಷಿಸಿದೆ. ಈ ಎರಡೂ ರಾಷ್ಟ್ರಗಳ ಪಾಲಿಗೆ ಚೀನಾ ಗಾಡ್​ಫಾದರ್ ಇದ್ದಂತೆ. ಆದರೆ, ಈಗ ಸಾಲದ ಸುಳಿಯಿಂದ ಈ ರಾಷ್ಟ್ರಗಳನ್ನು ಪಾರುಮಾಡುವುದಕ್ಕೆ ಚೀನಾ ಹಿಂದೇಟು ಹಾಕಿದೆ. ಈ ವಿದ್ಯಮಾನದ ಅವಲೋಕನ ಇಲ್ಲಿದೆ.

ಜಾಗತಿಕ ಸರ್ಕಾರಗಳ ಸ್ತರದಲ್ಲಿ ಚೀನಾ ಅತಿದೊಡ್ಡ ಸಾಲದಾತ ರಾಷ್ಟ್ರವಾಗಿ ಹೊಮ್ಮಿದೆ. ಚೀನಾ ಸರ್ಕಾರದ ನೀತಿಗಳನ್ನು ಅನುಸರಿಸುವ ಬ್ಯಾಂಕ್​ಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಾಲ ನೀಡುತ್ತ ಬಂದಿವೆ. ಇಂತಹ ಸಾಲದ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಅಥವಾ ವಿಶ್ವ ಬ್ಯಾಂಕ್​ನ ಸಾಲ ನೀಡುವಿಕೆಗಿಂತ ಹೆಚ್ಚಾಗಿದೆ. ಚೀನಾದ ನಡೆಯು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಅತಿಯಾಗಿ ಅವಲಂಬಿಸುವಂತೆ ಮಾಡುವ ‘ಡೆಟ್ ಡಿಪ್ಲೋಮಸಿ’ ಅಥವಾ ‘ಸಾಲದ ರಾಜತಾಂತ್ರಿಕ ನಡೆ’ ಎಂದು ಅಮೆರಿಕ ವ್ಯಾಖ್ಯಾನಿಸಿತ್ತು. ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಹಣದುಬ್ಬರ ಪ್ರಮಾಣ ಕೈಮೀರಿದೆ. ಇಂತಹ ಸನ್ನಿವೇಶದಲ್ಲಿ ಇವೆರಡೂ ದೇಶಗಳು ನೆರವಿನ ಹಸ್ತ ಚಾಚುವಂತೆ ಚೀನಾಕ್ಕೆ ಮನವಿ ಮಾಡಿವೆ. ಪಾಕಿಸ್ತಾನವು ತನ್ನ 400 ಶತಕೋಟಿ ಡಾಲರ್ ಸಾಲ ಮರು ವಿತರಣೆ ಮಾಡಿ ಹೊಸ ಲೆಕ್ಕದಲ್ಲಿ ಅದನ್ನು ಮುಂದುವರಿಸುವಂತೆ ಚೀನಾವನ್ನು ಕೋರಿತ್ತು. ಶ್ರೀಲಂಕಾ 250 ಕೋಟಿ ಡಾಲರ್ ಸಾಲದ ನೆರವು ನೀಡುವಂತೆ ಚೀನಾಕ್ಕೆ ಮನವಿ ಮಾಡಿತ್ತು. ಈ ಎರಡೂ ರಾಷ್ಟ್ರಗಳ ಮನವಿಯನ್ನು ಚೀನಾ ಇದುವರೆಗೂ ಪರಿಗಣಿಸಿಲ್ಲ.

ಸ್ವಹಿತಾಸಕ್ತಿ ಕೇಂದ್ರಿತ ನೆರವು: ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಮಹತ್ವಾಕಾಂಕ್ಷೆಯ ಬೆಲ್ಟ್-ರೋಡ್ ಇನಿಷಿಯೇಟಿವ್ ಅನುಷ್ಠಾನಕ್ಕಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಚೀನಾ ನೆರವಿನ ಬದ್ಧತೆಯನ್ನು ಘೋಷಿಸಿದೆ. ಎರಡೂ ದೇಶಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಪ್ರಾದೇಶಿಕವಾಗಿ ಸಾಕಷ್ಟು ಅಡೆತಡೆಗಳು ಎದುರಾಗಿವೆ. ರಾಜಕೀಯ ವಿರೋಧವೂ ವ್ಯಕ್ತವಾಗಿತ್ತು. ಈ ನಡುವೆ, ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪದಚ್ಯುತರಾಗಿ, ಪಿಎಂಎಲ್-ಎನ್ ನೇತೃತ್ವದ ಸರ್ಕಾರ ರಚನೆಯಾಗಿದೆ. ಶೆಹಬಾಜ್ ಷರೀಫ್ ನೂತನ ಪ್ರಧಾನಿಯಾಗಿದ್ದು, ಚೀನಾ ಆಪ್ತರಾಷ್ಟ್ರವೆಂದು ಪುನರುಚ್ಚರಿಸಿದ್ದಾರೆ. ಶ್ರೀಲಂಕಾದಲ್ಲೂ ರಾಜಕೀಯ ಅಸ್ಥಿರತೆ ಗೋಚರಿಸಿದ್ದು, ಸರ್ಕಾರವನ್ನು ಬರ್ಖಾಸ್ತುಗೊಳಿಸಲು ಒತ್ತಡ ಹೆಚ್ಚಾಗಿದೆ. ಹಣದುಬ್ಬರ ಪ್ರಮಾಣ ವಿಪರೀತ ಏರಿದ ಕಾರಣ ಸಾರ್ವಜನಿಕ ಪ್ರತಿಭಟನೆ ವ್ಯಕ್ತವಾಗಿದೆ. ಇಷ್ಟಾಗ್ಯೂ, ಚೀನಾ ಈ ದೇಶಗಳತ್ತ ನೆರವಿನ ಹಸ್ತ ಚಾಚಿಲ್ಲ.

ಮುಳುಗುತ್ತಿರುವ ಹಡಗು: ಶ್ರೀಲಂಕಾದ ಅರ್ಥವ್ಯವಸ್ಥೆ ಮುಳುಗುತ್ತಿರುವ ಹಡಗು. ಅದನ್ನು ಸರಿಪಡಿಸುವುದು ಅತ್ಯಂತ ಸಾಹಸದ ಕೆಲಸ. ಲಂಕಾ ಸರ್ಕಾರ ಚೀನಾದ ಸಲಹೆಯ ಪ್ರಕಾರ ಐಎಂಎಫ್​ನ ನೆರವು ಯಾಚಿಸಿದೆ. ಪಾಕಿಸ್ತಾನ ಕೂಡ ಐಎಂಎಫ್ ನೆರವಿಗೆ ಮೊರೆ ಹೋಗಿದೆ. ಆದರೆ, ಐಎಂಎಫ್​ನ ಪ್ರತಿಕ್ರಿಯೆ ಗೊತ್ತಾಗಬೇಕಷ್ಟೆ.

ಚೀನಾದಲ್ಲಿಯೂ ಎಲ್ಲವೂ ಸರಿಯಿಲ್ಲ: ಜಗತ್ತಿನ ಅತಿದೊಡ್ಡ ಸಾಲದಾತ ರಾಷ್ಟ್ರವಾಗಿ, ಅಮೆರಿಕಕ್ಕೆ ಸೆಡ್ಡು ಹೊಡೆವಂತಿದ್ದರೂ ಚೀನಾದಲ್ಲಿ ಸಹ ಆಂತರಿಕ ಸವಾಲಗಳಿಗೆ ಕೊರತೆ ಇಲ್ಲ. ಆರ್ಥಿಕ ಸಂಕಷ್ಟಗಳನ್ನು ಅದು ಎದುರಿಸುತ್ತಿದೆ. ಕೋವಿಡ್ 19 ಸಂಕಷ್ಟದ ಕೇಂದ್ರ ಬಿಂದುವಾದ ಚೀನಾದಲ್ಲಿ ಪದೇಪದೆ ಲಾಕ್​ಡೌನ್ ಆಗುತ್ತಿದೆ. 2020ರ ಆರಂಭದಲ್ಲಿ ಶಾಂಘೈ, ಶೆನ್​ರೆೆನ್ ಮುಂತಾದ ಟೆಕ್ನಾಲಜಿ ಮತ್ತು ಆರ್ಥಿಕ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಅರ್ಥವ್ಯವಸ್ಥೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿತ್ತು. ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಸೋಮವಾರ ತಿಳಿಸಿದ ಪ್ರಕಾರ, ದೇಶದ ಶೇಕಡ 5.5 ಜಿಡಿಪಿ ಬೆಳವಣಿಗೆ ಅಪಾಯದ ಸುಳಿಯಲ್ಲಿದೆ. ಇದನ್ನು ಸಾಧಿಸುವುದಕ್ಕೆ ಅಗತ್ಯ ಕ್ರಮಗಳನ್ನು ತುರ್ತಾಗಿ ಪಾಲಿಸುವ ಅನಿವಾರ್ಯತೆ ಆಡಳಿತಕ್ಕೆ ಎದುರಾಗಿದೆ.

ಪಾತಾಳಕ್ಕೆ ಕುಸಿದ ರ‍್ಯಾಂಕಿಂಗ್: ಶ್ರೀಲಂಕಾದ ಅರ್ಥವ್ಯವಸ್ಥೆ ಚೇತರಿಕೆ ಕಾಣದಷ್ಟು ಕುಸಿದಿರುವುದನ್ನು ಗಮನಿಸಿದ ಫಿಚ್ ರೇಟಿಂಗ್ಸ್, ಈ ದೇಶದ ರೇಟಿಂಗ್ ಅನ್ನು ಬಹಳಷ್ಟು ಕೆಳಕ್ಕೆ ಇಳಿಸಿದೆ. ವಿದೇಶಿ ಸಾಲ 51 ಶತಕೋಟಿ ಡಾಲರ್ ಮರುಪಾವತಿಸುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀಲಂಕಾ ಘೋಷಿಸಿದ ನಂತರದಲ್ಲಿ ಎಸ್​ಆಂಡ್​ಪಿ ಕೂಡ ರೇಟಿಂಗ್ಸ್ ಇಳಿಸಿದೆ. ಲಂಕಾದ ಸಾಲ ಮರುಪಾವತಿಯ ಮುಂದಿನ ದಿನಾಂಕ ಏ.18. ಅಂದು ಸಾಲ ಮರುಪಾವತಿ ಮಾಡದೇ ಹೋದರೆ, ರೇಟಿಂಗ್ಸ್ ಇನ್ನಷ್ಟು ಕುಸಿತ ಕಾಣಲಿದೆ, ಸಂಕಷ್ಟ ಹೆಚ್ಚಾಗಲಿದೆ ಎಂದು ಹೇಳಿದೆ.

ಲಂಕಾ ವಿಶ್ವಾಸಕ್ಕೆ ಹೊಡೆತ: ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಪಲಿತಾ ಕೊಹೊನಾ ಈ ವಾರ ಆರಂಭದಲ್ಲಿ ಬೀಜಿಂಗ್ ತೆರಳಿ ಮಾತುಕತೆ ನಡೆಸಿದ್ದರು. ಚೀನಾದ ಮೇಲೆ ‘ವಿಪರೀತ ಭರವಸೆ, ನಂಬಿಕೆ’ ಇದೆ. ದೇಶಕ್ಕೆ 100 ಕೋಟಿ ಡಾಲರ್ ಸಾಲವೂ ಸೇರಿದಂತೆ ದೊಡ್ಡ ಪ್ರಮಾಣದ ಸಾಲದ ನೆರವನ್ನು ಚೀನಾ ನೀಡುವ ವಿಶ್ವಾಸವಿದೆ. 100 ಕೋಟಿ ಡಾಲರ್ ಅನ್ನು ಜೂನ್ ತಿಂಗಳು ಚೀನಾದ ಸಾಲಕ್ಕೆ ಮರುಪಾವತಿ ಮಾಡಲು ಬಳಸಲಾಗುತ್ತದೆ ಎಂದು ಅವರು ಹೇಳಿದ್ದರು. ಆದರೆ, ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಚೀನಾದ ಮೇಲೆ ಲಂಕಾ ಇರಿಸಿದ ವಿಶ್ವಾಸಕ್ಕೆ ಮೊದಲ ಹೊಡೆತ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net