

ಕೊಲಂಬೋ: ಶ್ರೀಲಂಕಾದ ಚರ್ಚ್ ಹಾಗೂ ಹೋಟೆಲ್ಗಳ ಮೇಲೆ ದಾಳಿ ನಡೆಸಿದ ಸ್ಥಳೀಯ ಉಗ್ರ ಸಂಘಟನೆಯ ಆತ್ಮಹತ್ಯಾ ಬಾಂಬರ್ನ ಪತ್ನಿ ಭಾರತದಲ್ಲಿ ಅಡಗಿದ್ದಾಳೆ ಎಂದು ಶಂಕಿಸಲಾಗಿದೆ.
ಕಳೆದ ವರ್ಷದ ಏಪ್ರಿಲ್ 29ರಂದು 9 ಆತ್ಮಹತ್ಯಾ ಬಾಂಬರ್ಗಳು ಮೂರು ಚರ್ಚ್ ಹಾಗೂ ಕೊಲಂಬೋದ ಮೂರು ಲಕ್ಸುರಿ ಹೋಟೆಲ್ಗಳ ಮೆಲೆ ದಾಳಿ ನಡೆಸಿದ್ದರು. ಇದರಲ್ಲಿ 11 ಭಾರತೀಯರು ಸೇರಿ 260ಕ್ಕೂ ಅಧಿಕ ಜನರು ಹತ್ಯೆಗೀಡಾಗಿದ್ದರು. ಐಸಿಸ್ನ ಅಂಗಸಂಸ್ಥೆಯಾದ ಸ್ಥಳೀಯ ಉಗ್ರ ಸಂಘಟನೆ ನ್ಯಾಷನಲ್ ತವಾಹೀದ್ ಜಮಾತ್ನ ಸದಸ್ಯರಾಗಿದ್ದರು. ಇದರಲ್ಲಿ ಒಬ್ಬನ ಪತ್ನಿ ಭಾರತದಲ್ಲಿ ತಲೆಮರೆಸಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಕರಾವಳಿಯ ನಗರವಾದ ನೆಗೆಂಬೋದಲ್ಲಿನ ಸೇಂಟ್ ಸೆಬಾಸ್ಟೀನ್ ಚರ್ಚ್ನಲ್ಲಿ ಸ್ಫೋಟಿಸಿಕೊಂಡ ಆತ್ಮಹತ್ಯಾ ಬಾಂಬ್ ದಾಳಿಕೋರ ಅಚ್ಚಿ ಮೊಹಮ್ಮದನ್ ಪತ್ನಿ ಪುಲಸ್ತೀನಿ ರಾಜೇಂದ್ರನ್ ಅಲಿಯಾಸ್ ಸಾರಾ ಸೆಪ್ಟಂಬರ್ನಲ್ಲಿಯೇ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ತೆರಳಿದ್ದಾಳೆ ಎಂದು ಹೇಳಲಾಗಿದೆ.
ಸಾರಾಳ ಪರಾರಿಗೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯ ತನಿಖಾಧಿಕಾರಿ ಅರ್ಜುನ್ ಮಹೀನ್ಕಂದಾ ತಿಳಿಸಿದ್ದಾರೆ. ಸರಣಿ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು 200ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.
ಉಗ್ರ ಸಂಘಟನೆಯ ಅಡಗುತಾಣದಲ್ಲಿದ್ದ ಸಾರಾ ದಾಳಿ ಬಳಿಕ ಅಲ್ಲಿಂದ ಪಾರಾಗಿ ಪೂರ್ವ ಕರಾವಳಿಯ ಬಟ್ಟಿಕೊಲಾವಾ ನಗರದ ಮಾನ್ಕಾಡು ಪ್ರದೇಶದಲ್ಲಿದ್ದಳು ಎಂಬ ಮಾಹಿತಿ ದೊರೆತಿತ್ತು.
ಸಾರಾಳ ಸಹೋದರ ಹಾಗೂ ಆಕೆಯ ಸಂಬಂಧಿಯೊಬ್ಬರ ಸಹಾಯದಿಂದ ಮನ್ನಾರ್ ಪ್ರದೇಶದಿಂದ ದೋಣಿಯಲ್ಲಿ ಭಾರತಕ್ಕೆ ತೆರಳಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.