

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಅಮ್ಮನಹಟ್ಟಿ ಗ್ರಾಮದ ಶ್ರೀ ಗಂಗಾ ಮಾಳಿಕಾ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಮಣವು ಸೇವೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಅರಸೀಕೆರೆ ಹುಳಿಯಾರು ಸಂಪರ್ಕ ರಸ್ತೆಗೆ ಹೊಂದಿಕೊಂಡಂತೆ ಇರುವ ಕೆರೆಯಂಗಳದಲ್ಲಿ ಭಾನುವಾರ ರಾತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಡೆಮುಡಿಯ ಮೇಲೆ ಕಳಶ ಹಾಗೂ ದೇವಿಯ ಉತ್ತಮ ಮೂರ್ತಿಯನ್ನು ಜಯಘೋಷ, ಮದ್ದು ಗುಂಡಿನ ಪ್ರದರ್ಶನದೊಂದಿಗೆ ಬರಮಾಡಿಕೊಂಡರು. ದೇವಿಗೆ ಪ್ರಿಯವಾದ ಕಡಲೆಪುರಿ ಮಣೇವು ಸೇವೆಯನ್ನು ಭಕ್ತರು ನೆರವೇರಿಸಿದರು.
ಶಂಕರನಹಳ್ಳಿ, ದುಮ್ಮೇನಹಳ್ಳಿ, ಅಗ್ಗುಂದ, ರಾಮನಹಳ್ಳಿ, ದಾಸೀಹಳ್ಳಿ, ಬಂಡೀಹಳ್ಳಿ, ಲಕ್ಷ್ಮಿದೇವರಹಳ್ಳಿ, ಸೂಳೆಕೆರೆ, ಸಿದ್ದರಹಳ್ಳಿ, ಬೊಮ್ಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಚುನಾಯಿತ ಜನಪ್ರತಿನಿಧಿಗಳು ಗಂಗಮಾಳಿಕಾ ದೇವಿಯ ದರ್ಶನ ಪಡೆದರು. ಯುಗಾದಿ ಅಂಗವಾಗಿ ಹೋಳಿಗೆ ಪ್ರಸಾದ ವಿತರಣೆ ಮಾಡಲಾಯಿತು.