

ಹುಣಸೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಜನ ಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಸಿಬಿಟಿ ಕಾಲನಿಯ ಬುಧವಾರ ಅರ್ಕೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರತ್ನಪುರಿ ವಲಯದ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸಂಘಗಳ ಮೂಲಕ ಮಾಡುತ್ತಿದೆ. ಮದ್ಯವರ್ಜನ, ದೇವಾಲಯಗಳ ಜೀರ್ಣೋದ್ಧಾರ, ಹಾಲಿನ ಡೇರಿ ನಿರ್ಮಾಣಕ್ಕೆ ಸಹಾಯಧನ, ಸತ್ಯನಾರಾಯಣ ಪೂಜೆ, ಕೃಷಿ ಮೇಳ, ಕೃಷಿಯಂತ್ರ ಧಾರೆ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಸತಿ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದೆ. ಮಹಿಳಾ ಸಬಲೀಕರಣಕ್ಕೆ ಆರ್ಥಿಕ ನೆರವು ನೀಡಿ ಅತೀ ಹೆಚ್ಚು ಉಳಿತಾಯ ಮಾಡುವುದರೊಂದಿಗೆ ಹಣ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆ ಕಾವಲು ಗ್ರಾ.ಪಂ.ಅಧ್ಯಕ್ಷ ರಮೇಶ್ ಹಾಗೂ ಪೂಜಾ ಸಮಿತಿ ಅಧ್ಯಕ್ಷ ಕುಪ್ಪುಸ್ವಾಮಿ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು. ಜಿಲ್ಲಾ ಜನ ಜಾಗೃತಿ ಸಮಿತಿ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಮುಖಂಡರಾದ ಶಿವಗಾಮಿ, ಶಿವಲಿಂಗಪ್ಪ, ವೆಂಕಟೇಶ್‌ಗೌಡ, ರಾಮಯ್ಯ, ಚಿನ್ನಸ್ವಾಮಿ, ವೆಂಕಟೇಶ್, ರಾಮಸ್ವಾಮಿ, ರವಿ, ಹುಂಡಿಮಾಳ ಸುರೇಶ್, ಗಣೇಶ್,ಮಹದೇವ್, ವೀರಭದ್ರಸ್ವಾಮಿ, ಕನಕರಾಜು, ಜನ ಜಾಗೃತಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ತಾಲೂಕು ಯೋಜನಾಧಿಕಾರಿ ಧನಂಜಯ, ಪೂಜಾ ಸಮಿತಿ ಸದಸ್ಯರು, ಸಂಘಗಳ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಇತರರಿದ್ದರು.