ಶ್ರೀ ಅಣಿವೀರೇಶನ ಕೋರವಾರ ಜಾತ್ರೆ

temple
Published on

ತುಂಬ ಹಳೆಯದಾಗಿದ್ದರೂ ಆಧುನಿಕ ಸ್ಪರ್ಶ ಕಂಡಿರುವ ದೇವಾಲಯ ಶ್ರೀಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನ. ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಸಾಗಿದರೆ ಕಾಣುವ ಊರೇ ಚಿತ್ತಾಪುರ ತಾಲೂಕಿನ ಕೋರವಾರ. ಇಲ್ಲಿಂದ ಕಾಳಗಿ ಮಾರ್ಗದ ರಸ್ತೆಯಲ್ಲಿ ಚಲಿಸಿದರೆ ಅಣಿವೀರಭದ್ರೇಶ್ವರ ದೇವಸ್ಥಾನದ ದೊಡ್ಡ ಮಹಾದ್ವಾರ ಕಾಣಿಸುತ್ತದೆ.

ವಿಶಾಲ ಪ್ರಾಂಗಣದ ಮಧ್ಯೆ ಶ್ರೀ ಅಣಿವೀರಭದ್ರೇಶ್ವರ ಗರ್ಭಗುಡಿ ಇದೆ. ಗುಡಿಯೊಳಗೆ ಸಾಕ್ಷಾತ್ ವೀರಭದ್ರೇಶ್ವರ ದೇವರ ಅವತಾರದ ಪ್ರತಿರೂಪದಂತೆ ತೋರುವ ಅಣಿವೀರಭದ್ರೇಶ್ವರ ವಿಗ್ರಹ ಭಕ್ತಾದಿಗಳಲ್ಲಿ ಧನ್ಯತೆಯ ಭಾವ ಮೂಡಿಸುತ್ತದೆ. ದೇವಾಲಯದ ಹೊರಭಾಗದಲ್ಲಿ ಕಲ್ಯಾಣಮಂಟಪವಿದೆ.

ಪ್ರತಿ ಮಹಾಶಿವರಾತ್ರಿಯಂದು ಪ್ರಾರಂಭವಾಗುವ ಜಾತ್ರೆಯಲ್ಲಿ ಭಕ್ತರು ಅಗ್ನಿ ತುಳಿಯುತ್ತಾರೆ. ಐದು ಅಡಿ ಎತ್ತರದಷ್ಟು ಕಟ್ಟಿಗೆಗಳನ್ನು ಅಗ್ನಿಕುಂಡದಲ್ಲಿ ಹಾಕಿ ಬೆಂಕಿ ಹಚ್ಚಲಾಗುತ್ತದೆ. ಎಲ್ಲ ಕಟ್ಟಿಗೆಗಳು ಸುಟ್ಟು ಕನಿಷ್ಠ ಎರಡು ಅಡಿ ಎತ್ತರದ ಇದ್ದಲಿನ ಬೆಂಕಿಯಲ್ಲಿ ಭಕ್ತರು ಕಾಲಿಟ್ಟು ಹೋಗುತ್ತಾರೆ.ಅಗ್ನಿ ತುಳಿದ ಮರುದಿನ ರಾತ್ರಿ ತೇರು ಎಳೆಯುವ ಕಾರ್ಯಕ್ರಮ ನಡೆಯುತ್ತದೆ.

ಕೋರವಾರಧೀಶನ ಹಿನ್ನೆಲೆ: ಒಬ್ಬ ವ್ಯಕ್ತಿ ವೀರಭದ್ರೇಶ್ವರಸ್ವಾಮಿಯ ಕುರಿತು ತಪಸ್ಸು ಮಾಡುತ್ತಿದ್ದ. ಆತನ ಭಕ್ತಿಗೆ ಮೆಚ್ಚಿ ವೀರಭದ್ರೇಶ್ವರ ದರ್ಶನ ಭಾಗ್ಯ ಕರುಣಿಸಿ ನಿನಗೆ ಏನು ವರ ಬೇಕೆಂದು ಕೇಳುತ್ತಾರೆ. ಆಗ ಭಕ್ತ, ನೀವು ನಮ್ಮೂರಿನಲ್ಲಿ ಬಂದು ನೆಲೆಸಬೇಕೆಂಬ ಬಯಕೆ ವ್ಯಕ್ತಪಡಿಸಿದ. ಆಗ ವೀರಭದ್ರೇಶ್ವರ, ನಿನ್ನ ಜತೆಗೆ ಬರುತ್ತೇನೆ. ನೀನು ಮುಂದೆ ನಡೆ. ನಾನು ಹಿಂದೆ ಬರುತ್ತೇನೆ. ಆದರೆ ಯಾವುದೇ ಕಾರಣಕ್ಕೂ ನನ್ನನ್ನು ತಿರುಗಿ ನೋಡಬಾರದು ಎನ್ನುತ್ತಾರೆ. ಹಾಗೇನಾದರೂ ತಿರುಗಿ ನೋಡಿದರೆ ನಾನು ಅದೇ ಸ್ಥಳದಲ್ಲೇ ನೆಲೆಸುತ್ತೇನೆ ಎಂದು ಭಕ್ತನ ಹಿಂದೆ ಬರುತ್ತಾರೆ. ಹೀಗಿರುವಾಗ ಭಕ್ತನು ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಹಿಂದೆ ಬರತೊಡಗಿದ್ದ ವೀರಭದ್ರೇಶ್ವರರ ಗೆಜ್ಜೆಯ ಸಪ್ಪಳ ಭಕ್ತನ ಕಿವಿಗೆ ಕೇಳಿಸದೆ ಹೋಗುತ್ತದೆ. ಆಗ ಭಕ್ತ ಕೋರವಾರ ಸಮೀಪದ ಎತ್ತರದ ಪ್ರದೇಶದಲ್ಲಿ ಹಿಂದಕ್ಕೆ ತಿರುಗಿ ನೋಡುತ್ತಾನೆ. ಆಗಲೇ ವೀರಭದ್ರೇಶ್ವರ ತಟಸ್ಥವಾಗಿ ವಿಗ್ರಹ ರೂಪತಾಳಿ ಅಣಿಯಲ್ಲಿ ನೆಲೆಸಿರುತ್ತಾರಂತೆ. ಆಗಿನಿಂದಲೇ ಅಣಿವೀರಭದ್ರೇಶ್ವರ ಎಂಬ ಹೆಸರು ಜನಮನದೊಳಗೆ ಚಾಲ್ತಿಯಲ್ಲಿದೆ ಎಂದು ಹಿರಿಯರು ಹೇಳುತ್ತಾರೆ.

ರಥೋತ್ಸವ: ಫೆ. 22ರಂದು ಅಣಿವೀರಭದ್ರೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ರಾತ್ರಿ ವಿವಿಧ ಗ್ರಾಮಗಳ ಭಕ್ತ ರಿಂದ ಶಿವಭಜನೆ ಜರುಗಲಿದೆ. 23ರಂದು ಬೆಳಗ್ಗೆ ರುದ್ರಾಭಿಷೇಕ, ಸಂಜೆ ಅಗ್ನಿಪೂಜೆ, ಪ್ರಸಾದ ವಿತರಣೆ. ರಾತ್ರಿ ದೇವರ ಪಲ್ಲಕ್ಕಿ ಉತ್ಸವ, ಪುರವಂತರೊಂದಿಗೆ ಭಕ್ತರ ಅಗ್ನಿಪ್ರವೇಶ ನಡೆಯಲಿದೆ. 24ರಂದು ಸಂಜೆ ಕೋರವಾರ ಗ್ರಾಮದಿಂದ ಹೊರಡುವ ಭವ್ಯ ಮೆರವಣಿಗೆ 4 ಕಿ.ಮೀ. ಕ್ರಮಿಸಿ ದೇವಸ್ಥಾನಕ್ಕೆ ಬಂದು ತಲುಪುತ್ತದೆ. ರಾತ್ರಿ ರಥೋತ್ಸವ ಕಾರ್ಯಕ್ರಮವಿದೆ. ನಂತರ ಕಲಾವಿದರಿಂದ ಶಿವಭಜನೆ, ಸಂಗೀತ, ಕೀರ್ತನೆ, ಗೀಗೀ ಪದ ಸೇರಿ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಾಗಲಿವೆ. 25ರಂದು ಪೈಲ್ವಾನರಿಂದ ಜಂಗಿಕುಸ್ತಿಗಳು ನಡೆಯಲಿವೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮಂಜುನಾಥ ಸ್ವಾಮಿ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net