ಟಾಲಿವುಡ್​ ಆಯ್ತು ಈಗ ಬಾಲಿವುಡ್​ಗೆ ಎಂಟ್ರಿ ಕೊಟ್ಟ 'ಕಿಸ್'​ ಬೆಡಗಿ! ಸ್ಟಾರ್​ ನಟನ ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ

ವಿಜಯವಾಣಿ - 2024-08-15T114153.568
Published on

ಮುಂಬೈ: 'ಕಿಸ್'​ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಶ್ರೀಲೀಲಾ, ತದನಂತರ ಹೆಚ್ಚು ಗುರುತಿಸಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ. ಮಹೇಶ್​ ಬಾಬು ಅಭಿನಯದ 'ಗುಂಟೂರು ಕಾರಂ', ರಾಮ್​ ಪೋತಿನೇನಿ ನಟಿಸಿದ 'ಸ್ಕಂದ' ಸೇರಿದಂತೆ ಸ್ಟಾರ್​ ನಟರ ಸಿನಿಮಾಗಳಲ್ಲಿ ಕುಣಿದು ಕುಪ್ಪಳಿಸಿದ ನಟಿ, ಕೆಲವೇ ಕೆಲವು ಹಿಟ್ ನೋಡಿದ್ದೇ ವಿನಃ ಉಳಿದದ್ದೆಲಾ ಸೋಲು. ಇದೆಲ್ಲದರ ಮಧ್ಯೆ ಇದೀಗ ನೇರವಾಗಿ ಬಾಲಿವುಡ್​ಗೆ ಹಾರಿರುವ ಶ್ರೀಲೀಲಾ, ನಟ ಸಿದ್ಧಾರ್ಥ್​​ ಮಲ್ಹೋತ್ರಾ ಜತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

ಚಿತ್ರರಂಗದಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ಹೀರೋಯಿನ್ ಅಂದರೆ ಅದು ಶ್ರೀಲೀಲಾ. ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್​ರಂತಹ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ಪಡೆದ 'ಕಿಸ್'​ ಬೆಡಗಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ತೆಲುಗು ಸಿನಿಪ್ರೇಕಕರಿಂದಲೂ ಸೈ ಎನಿಸಕೊಂಡರು. ಇದೀಗ ಬಾಲಿವುಡ್​ ನಿರ್ದೇಶಕರ ಕಣ್ಣಿಗೆ ಬಿದ್ದ ನಟಿ, ದೊಡ್ಡ ಪ್ರಾಜೆಕ್ಟ್​ನಲ್ಲಿ ಅಭಿನಯಿಸುವ ಚಾನ್ಸ್ ಪಡೆದಿದ್ದಾರೆ.

ಬಲ್ವಂದಿರ್​ ಸಿಂಗ್​ ನಿರ್ದೇಶನದ 'ಮಿಟ್ಟಿ' ಸಿನಿಮಾದಲ್ಲಿ ನಟ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಕೌಟುಂಬಿಕ ಕಥೆ ಆಧರಿಸಿದ ಚಿತ್ರ ಇದಾಗಿದೆ. ಮೊದಲಿಗೆ ಸಿನಿಮಾ ಕಥೆ ಕೇಳಿದ ನಟಿ, ನಂತರದಲ್ಲಿ ತಾನು ನಟಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ಅಕ್ಟೋಬರ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಶೀಘ್ರವೇ ಚಿತ್ರತಂಡ ಹಂಚಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net