ಹೊಸ ಉತ್ಸಾಹದಲ್ಲಿ ಶ್ರೀಲೀಲಾ : ಹುಟ್ಟುಹಬ್ಬದ ಖುಷಿ ಹೆಚ್ಚಿಸಿದ ವೈದ್ಯ ಪದವಿ, ಹಿಂದಿ ಡೆಬ್ಯೂ

ಶ್ರೀಲೀಲಾ
ಶ್ರೀಲೀಲಾ
Published on

ಪ್ರಮುಖ ಮುಖ್ಯಾಂಶಗಳು

  • ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾನ್ಸಿಂಗ್ ಕ್ವೀನ್
  • ಹಿಂದಿ ಡೆಬ್ಯೂ ಸಿನಿಮಾ ಈ ವರ್ಷವೇ ರಿಲೀಸ್, ನಟಿಗೆ ವೈದ್ಯ ಪದವಿಯ ಗರಿ
  • ಜಾಲತಾಣದಲ್ಲಿ ಕಾರ್ತಿಕ್ ಆರ್ಯನ್​ ವಿಷ್​, ಹರಿಡಿದ ಗುಸುಗುಸು ಸುದ್ದಿ
ಬಹುಭಾಷಾ ತಾರೆ ಶ್ರೀಲೀಲಾ ಸೋಮವಾರ 25ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಅವರು ಸದ್ಯ ದಕ್ಷಿಣ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಶ್ರೀಲೀಲಾ ಅಭಿನಯದ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿವೆಯಾದರೂ ಅವರಿಗೆ ತೆಲುಗಿನ ‘ಭಗವಂತ ಕೇಸರಿ’ ಬಳಿಕ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ‘ಆದಿಕೇಶವ’, ‘ಎಕ್ಸ್ಟ್ರಾ-ಆರ್ಡನರಿ ಮ್ಯಾನ್’, ‘ಗುಂಟೂರು ಕಾರಂ’, ‘ರಾಬಿನ್‌ಹುಡ್’, ‘ಮಾಸ್ ಜಾತರಾ’, ‘ಉಸ್ತಾದ್ ಭಗತ್ ಸಿಂಗ್’, ತಮಿಳಿನ ‘ಪರಾಶಕ್ತಿ’ ಸೇರಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರೂ ಯಾವ ಚಿತ್ರವು ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ, ಈ ಮಧ್ಯೆ, ‘ಪುಷ್ಪ 2: ದ ರೂಲ್’ನಲ್ಲಿ ‘ಕಿಸಕ್’ ಸಾಂಗ್‌ನ ಸ್ಪೆಷಲ್ ಡಾನ್ಸ್ ನಟಿಯನ್ನು ಮತ್ತೆ ಮುನ್ನೆಲೆಗೆ ಕರೆತಂದಿತ್ತು. ಆ ಮೂಲಕ ದಕ್ಷಿಣ ಭಾರತದಲ್ಲಿ ಶ್ರೀಲೀಲಾ ‘ಡಾನ್ಸಿಂಗ್ ಕ್ವೀನ್’ ಬಿರುದಿನ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡರು. ಇನ್ನು ಈ ಬಾರಿಯ ಹುಟ್ಟುಹಬ್ಬ ನಟಿಗೆ ತುಂಬಾ ವಿಶೇಷ. ಇದೇ ವರ್ಷ ಮುಂಬೈನ ಡಿ.ವೈ.ಪಾಟೀಲ್ ವಿವಿಯಿಂದ ಎಂಬಿಬಿಎಸ್ ಡಿಗ್ರಿ ಪಡೆದಿರುವ ಅವರು ಆ್ಯಕ್ಟರ್ ಜತೆಗೆ ಡಾಕ್ಟರ್ ಆಗಿದ್ದಾರೆ. ಅನುರಾಗ್ ಬಸು ನಿರ್ದೇಶನದ ಹೊಸ ಸಿನಿಮಾ ಮೂಲಕ ಬಾಲಿವುಡ್‌ಗೆ ಡೆಬ್ಯೂ ಮಾಡುತ್ತಿದ್ದಾರೆ. ಈ ಎರಡು ಸಂಗತಿಗಳು ನಟಿಯ 25ನೇ ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸಿವೆ. ಇದೇ ಖುಷಿ, ಉತ್ಸಾಹದಲ್ಲಿ ಶ್ರೀಲೀಲಾ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಇನ್ನು ‘ಪರಾಶಕ್ತಿ’ ಬಳಿಕ ತಮಿಳಿನಲ್ಲೂ ಶ್ರೀಲೀಲಾ ಬೇಡಿಕೆ ಹೆಚ್ಚಾಗಿದೆ. ಸದ್ಯ ಧನುಷ್ ಅಭಿನಯದ 55ನೇ ಚಿತ್ರಕ್ಕೆ ಅವರು ನಾಯಕಿಯಾಗಿದ್ದು, ಆ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್

ಕಾರ್ತಿಕ್ ಆರ್ಯನ್ ಸ್ಪೆಷಲ್ ವಿಶ್

ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಆ್ಯಕ್ಷನ್-ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲಿ ಶ್ರೀಲೀಲಾ, ನಟ ಕಾರ್ತಿಕ್ ಆರ್ಯನ್‌ಗೆ ಜೋಡಿಯಾಗಿದ್ದಾರೆ. ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಇದೇ ವರ್ಷ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ನಡುವೆ ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಅದನ್ನು ಇಬ್ಬರೂ ನಿರಾಕರಿಸಿದ್ದಾರೆ. ಆದರೆ, ಶ್ರೀಲೀಲಾ ಬರ್ತ್‌ಡೇಗೆ ಕಾರ್ತಿಕ್ ಆರ್ಯನ್ ಜಾಲತಾಣದಲ್ಲಿ ‘ಹ್ಯಾಪಿ ಬರ್ತ್‌ಡೇ ಶ್ರೀ ಶ್ರೀ’ ಎಂದು ವಿಶೇಷವಾಗಿ ಶುಭ ಕೋರಿದ್ದು, ಅದಕ್ಕೆ ‘ಧನ್ಯವಾದಗಳು ಕೆಕೆ’ ಎಂದು ನಟಿ ಉತ್ತರಿಸಿದ್ದಾರೆ. ಹೀಗಾಗಿ, ಇಬ್ಬರ ನಡುವಿನ ಗುಸುಗುಸು ಸುದ್ದಿ ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net