

ನವದೆಹಲಿ: ಭಾರತದ ಹಾಕಿ ದಿಗ್ಗಜ ಪಿ.ಆರ್. ಶ್ರೀಜೇಶ್ ಪ್ರೇಮಕಥೆಯು ಯಾವುದೇ ಚಲನಚಿತ್ರಕ್ಕಿಂತ ಕಡಿಮೆಯಿಲ್ಲ.
ಈ ರಿಯ ಗೋಲ್‌ಕೀಪರ್ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಕಂಚು ಗೆದ್ದ ನಂತರ ತಮ್ಮ ಸುದೀರ್ಘ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಮೈದಾನದಲ್ಲಿ ಎದುರಾಳಿಗಳಿಗೆ ತಡೆಗೋಡೆಯಾಗಿ ಮಾರ್ಪಟ್ಟು ಅವರ ಗೋಲು ಯತ್ನಕ್ಕೆ ಅಡ್ಡಿಪಡಿಸುವ 'ಭಾರತದ ಮಹಾಗೋಡೆ'.. ವೈಯಕ್ತಿಕ ಜೀವನದಲ್ಲೂ ಲವ್ ಗೋಲು ಬಾರಿಸಿದ್ದಾರೆ.
ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಪತ್ನಿ ಅನಿಶ್ಯಾ ಅವರೊಂದಿಗಿನ ಸುಂದರವಾದ ಪ್ರೇಮಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನಮ್ಮಿಬ್ಬರ ಪ್ರೀತಿ ಸಿನಿಮೀಯವಾಗಿತ್ತು. ತಾನು ದ್ವೇಷಿಸಿದ ಹುಡಿಗಿಯನ್ನು ಪ್ರೀತಿಸಿ ಮದುವೆಯಾದೆ ಎಂದು ಹೇಳಿದ್ದಾರೆ.
"ನಾನು ಕೇರಳದ ಕಣ್ಣೂರಿನ ಕ್ರೀಡಾ ಶಾಲೆಯಲ್ಲಿ 2001 ರಲ್ಲಿ ಓದುತ್ತಿದ್ದಾಗ ಅನಿಶ್ಯಾ ಕೂಡ ಅದೇ ಶಾಲೆಗೆ ಸೇರಿಕೊಂಡಳು. ಅವಳು ಬರುವವರೆಗೂ ನಾನು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದೆ. ತರಗತಿಯಲ್ಲಿ ಟಾಪರ್, ಸೂಪರ್ಸ್ಟಾರ್. ಗುರುಗಳಿಗೆ ನೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಆದರೆ ಅವಳು ಬಂದ ಕೂಡಲೇ ನನ್ನ ಎಲ್ಲಾ ಟೈಟಲ್‌ಗಳು ಕಳೆದು ಹೋಗಿದ್ದವು. ನನಗೆ 50 ಅಂಕ ಬರುವ ಕಡೆ 35-42 ಅಂಕಗಳು ಬರುತ್ತಿದ್ದವು. ಅವಳು 49 ಅಂಕಗಳನ್ನು ಪಡೆದು ಎಲ್ಲರಿಗೂ ಪ್ರಿಯವಾದಳು. ನಾನು ಅವಳನ್ನು ಇದೇ ಕಾರಣಕ್ಕಾಗಿ ದ್ವೇಷಿಸುತ್ತಿದ್ದೆ. ಬಳಿಕ ಅವಳ ಮೇಲೆ ನನಗೆ ಅರಿವಿಲ್ಲದಂತೆ ಪ್ರೀತಿ ಬೆಳೆದು ಪ್ರೀತಿಸತೊಡಗಿದೆ ಎಂದು ತಿಳಿಸಿದ್ದಾರೆ.
ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರೂ 2013ರಲ್ಲಿ ಕುಟುಂಬ ಸದಸ್ಯರ ಆಶೀರ್ವಾದದೊಂದಿಗೆ ವಿವಾಹವಾದರು. ವೃತ್ತಿಯಲ್ಲಿ ಅನಿಶ್ಯಾ ಆಯುರ್ವೇದ ವೈದ್ಯೆಯಾಗಿದ್ದರೂ, ಸ್ವತಃ ಲಾಂಗ್ ಜಂಪರ್. ಕ್ರೀಡೆಯ ವಿಚಾರದಲ್ಲಿ ಹೆಚ್ಚಿನ ಬೆಂಬಲ ನೀಡುತ್ತಾಳೆ ಎನ್ನುತ್ತಾರೆ ಶ್ರೀಜೇಶ್.
ಈ ಗೋಲ್‌ಕೀಪರ್ ತನ್ನ ಹೆಂಡತಿಯ ಮೇಲಿನ ಪ್ರೀತಿಯಿಂದ ತನ್ನ ಹಾಕಿ ಸ್ಟಿಕ್‌ನಲ್ಲಿ ಆಕೆ ಹೆಸರನ್ನು ಹಾಕಿಕೊಂಡಿದ್ದಾರೆ. ಈ ದಂಪತಿಗೆ ಪುತ್ರ ಶ್ರೀಯಾನ್ ಮತ್ತು ಪುತ್ರಿ ಅನುಶ್ರೀ ಮಕ್ಕಳಿದ್ದಾರೆ. ಹಾಕಿ ಸ್ಟಿಕ್‌ನಲ್ಲಿ ಪತ್ನಿ ಹೆಸರಿನ ಜೊತೆಗೆ ಇಬ್ಬರ ಹೆಸರನ್ನೂ ಬರೆದಸಿಕೊಂಡಿದ್ದಾರೆ. ಇತ್ತೀಚೆಗೆ ಶ್ರೀಜೇಶ್ ಒಲಿಂಪಿಕ್ಸ್ ಪಂದ್ಯಗಳಲ್ಲೂ ಈ ಸ್ಟಿಕ್ನೊಂದಿಗೆ ಕಾಣಿಸಿಕೊಂಡಿದ್ದರು.