

ಶಿವಮೊಗ್ಗ: ಶ್ರಾವಣ ಚಿಂತನ ಎಂಬುದೇ ಅರಿವಿನ ತೇರು. ಕಳೆದ 45 ವರ್ಷಗಳಿಂದ ಮನೆ ಮನೆಗಳು, ಸಂಘ ಸಂಸ್ಥೆಗಳಲ್ಲಿ ಮಾಡಿಕೊಂಡು ಬರಲಾಗಿದೆ. ಇದು ಅನುಭವ ಮಂಟಪಕ್ಕೆ ಸಮನಾಗಿದೆ ಎಂದು ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬಣ್ಣಿಸಿದರು.
ಜಿಲ್ಲಾ ಕೈಗಾರಿಕಾ ಮತ್ತು ಶಿಕ್ಷಣ ತರಬೇತಿ ಕೇಂದ್ರದಲ್ಲಿ ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್ ಗುರುಬಸವ ಅಧ್ಯಯನ ಪೀಠ, ಜಿಲ್ಲಾ ಕೈಗಾರಿಕಾ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಜಿಲ್ಲಾ ಕೈಗಾರಿಕಾ ಸಂಘ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಆಶ್ರಯದಲ್ಲಿ ಸ್ಮರಣೀಯ ಸಾಧಕರು, ಮೌಲಿಕ ಚಿಂತನೆ-ಉಪನ್ಯಾಸ ಮಾಲಿಕೆ, ಮನೆ-ಮನೆಗಳಲ್ಲಿ ಶ್ರಾವಣ ಚಿಂತನ-2024 ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಮೇಲು-ಕೀಳೆಂಬ ಭಾವನೆ ಕೆಲಸಗಳಲ್ಲೂ ಬಂದಿರುವುದು ದುರ್ದೈವದ ಸಂಗತಿ. ಕಾಯಕದಲ್ಲಿ ಯಾವುದೂ ಮೇಲಲ್ಲ. ಯಾವುದೂ ಕೀಳಲ್ಲ. ಕಾಯಕ ಎಂಬುದೇ ಸಮಾನತೆ. ಕಾಯಕದಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಕಾಯಕದ ತತ್ವಗಳನ್ನು ಬಸವಾದಿ ಶರಣರು ಸಮಾಜಕ್ಕೆ ನೀಡಿದ್ದಾರೆ. ಕಾಯಕ ಎಂಬುದು ಸತ್ಯ, ಶುದ್ಧ ಮತ್ತು ಪ್ರಾಮಾಣಿಕವಾಗಿರಬೇಕು. ಕಾಯಕ ಮಾಡಿ ಬಂದಿದ್ದನ್ನು ದಾಸೋಹದ ಮೂಲಕ ಹಂಚಬೇಕು. ಕಾಯಕದ ಮೂಲಕ ನಿರುದ್ಯೋಗ ಸಮಸ್ಯೆ ಪರಿಹಾರ ಆಯಿತು. ದಾಸೋಹ ಬಡತನ ನಿವಾರಣೆಗೆ ಕಾರಣವಾಯಿತು. ಕಾಯಕ ಮತ್ತು ದಾಸೋಹವನ್ನು ಪಾಲನೆ ಮಾಡಿದರೆ ನಿರುದ್ಯೋಗ ಮತ್ತು ಬಡತನ ನಿವಾರಣೆ ಆಗಲಿದೆ ಎಂದರು.
ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಮಾತನಾಡಿ, ಶ್ರಾವಣದಲ್ಲಿ ಒಳ್ಳೆಯದನ್ನು ಕೇಳಬೇಕು. ಧರ್ಮವನ್ನು ಉಳಿಸಬೇಕು. ಮೌಲ್ಯವನ್ನು ಬೆಳೆಸಬೇಕು. ಮೋಕ್ಷವೇ ನಮ್ಮ ಗುರಿ ಆಗಿರಬೇಕು. ಮತ ಬೇರೆ, ಧರ್ಮ ಬೇರೆಯಾಗಿದೆ. ಧರ್ಮ ಎಲ್ಲಿಲ್ಲವೋ ಅಲ್ಲೆಲ್ಲ ಸಮಾಜ ಹಾಳಾಗಿದೆ. ಒಟ್ಟಿಗೆ ಬಾಳುವುದೇ ಧರ್ಮವಾಗಿದೆ. ಧರ್ಮ ಎಂದರೆ ಪೂಜೆ, ಪ್ರಾರ್ಥನೆ ಅಥವಾ ನಮಾಜ್ ಮಾಡುವುದಷ್ಟೇ ಅಲ್ಲ. ಆದರೆ ಅವುಗಳನ್ನೇ ಧರ್ಮ ಎಂದುಕೊಂಡಿರುವುದು ನಮ್ಮ ದೌರ್ಬಲ್ಯ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಮಾತನಾಡಿ, 1982ರಲ್ಲಿ ಕೈಗಾರಿಕಾ ಸಂಘ ಪ್ರಾರಂಭವಾಯಿತು. ಶಿವಮೊಗ್ಗದಲ್ಲಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚಿನ ಸಾಧನೆ ಸಂಘ ನಮ್ಮದಾಗಿದ್ದು ಸಂಘದಿಂದ ಆಪರಲ್ ಸಂಸ್ಥೆಗಳಿಗೆ ಅನುಕೂಲವಾಗಿದೆ. ಬಹಳಷ್ಟು ಕೈಗಾರಿಕಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ದುಡಿಮೆಗೆ ಸೀಮಿತವಾಗಿದ್ದಾರೆ. ಆದರೆ ಅಂತಿಮವಾಗಿ ಮನಸ್ಸಿಗೆ ನೆಮ್ಮದಿ, ಶಾಂತಿ ಶ್ರಾವಣ ಚಿಂತನದಂತಹ ಕಾರ್ಯಕ್ರಮಗಳಿಂದ ಸಿಗಲಿದೆ ಎಂದರು.
ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ವ್ಯಾಪಾರ ಮತ್ತು ಮಾಡುವ ಪ್ರತಿ ಕೆಲಸದಲ್ಲೂ ಧರ್ಮವಿದೆ. ಶ್ರಾವಣ ಚಿಂತನವನ್ನು ಕೊಳಚೆ ಪ್ರದೇಶಗಳಲ್ಲಿ ಮಾಡಬೇಕು. ಅಲ್ಲಿ ಸುಧಾರಣೆ ತರಬೇಕಾದರೆ ಕಾರ್ಯಕ್ರಮಗಳನ್ನು ಅಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕಾ, ಶಿಕ್ಷಣ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಕುಪೇಂದ್ರಪ್ಪ ಆಯನೂರು ಇ-ಶ್ರಮ ಕಾರ್ಡ್ ವಿತರಿಸಿದರು. ಜಿಲ್ಲಾ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಅನಂತರಾಮು ಮಾತನಾಡಿದರು. ಎಂಎಲ್‌ಸಿ ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ್ ಪೊನ್ನಪ್ಪ ಉಪಸ್ಥಿತರಿದ್ದರು.
ಮೌಲ್ಯ ಬಿಟ್ಟು ದಾರಿ ತಪ್ಪುತ್ತಿರುವ ಪರಿಣಾಮ ಉದ್ಯಮದಲ್ಲಿ ನಷ್ಟದ ದಾರಿ ಹಿಡಿಯುತ್ತಿದ್ದೇವೆ. ಯಾವತ್ತೂ ಮೌಲ್ಯಗಳನ್ನು ಬಿಟ್ಟು ಜೀವನ ಮಾಡಬಾರದು. ಧರ್ಮ ಎನ್ನುವುದು ನಮ್ಮ ಆತ್ಮ ಶುದ್ಧೀಕರಣ ಮಾಡಿಕೊಳ್ಳುವುದಾಗಿದೆ. ಆದರೆ ಕೆಲವರು ಧರ್ಮದ ನೆಪದಲ್ಲಿ ದಾರಿ ತಪ್ಪುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ಆಗಬಾರದು.- ಬಲ್ಕಿಶ್‌ಬಾನು, ಎಂಎಲ್ಸಿ