

ಬರ್ಲಿನ್: ಅನಾರೋಗ್ಯಕ್ಕೀಡಾಗಿ ರಜೆ (ಸಿಕ್ ಲೀವ್) ಕೇಳುವ ಉದ್ಯೋಗಿಗಳ ಮೇಲೆ ಜರ್ಮನಿಯ ಕಂಪನಿಗಳು ಬೇಹುಗಾರಿಕೆ ನಡೆಸುತ್ತಿವೆ ಎಂದು ‘ಸೌತ್ ಚೈನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.
ಸಿಕ್ ಲೀವ್ಗೆ ಅರ್ಜಿ ಹಾಕುತ್ತಿರುವ ನೌಕರರ ಸಂಖ್ಯೆ ಗಣನೀಯವಾಗಿ ಏರಿರುವುದರಿಂದ ಕಂಪನಿಗಳು ಈ ಕೆಲಸಕ್ಕೆ ಕೈಹಾಕಿವೆ. ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳು ಒಂದು ವರ್ಷದಲ್ಲಿ 40ರಿಂದ 100 ದಿನಗಳ ಸಿಕ್ ಲೀವ್ಗೆ ಅರ್ಜಿ ಹಾಕಿದ್ದಾರೆ.
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಕಲೆ ಹಾಕಿರುವ ಮಾಹಿತಿ ಪ್ರಕಾರ, 2023ರಲ್ಲಿ ಸರಾಸರಿ ಶೇ. 6.8ರಷ್ಟು ಕೆಲಸದ ಅವಧಿಯನ್ನು ನೌಕರರು ಅನಾರೋಗ್ಯದಿಂದಾಗಿ ತಪ್ಪಿಸಿದ್ದಾರೆ. ಈ ಪ್ರಮಾಣವು ಫ್ರಾನ್ಸ್, ಇಟಲಿ, ಸ್ಪೇನ್ನಲ್ಲಿ ಇರುವುದಕ್ಕಿಂತ ಹೆಚ್ಚಾಗಿದೆ.
ಈಗಾಗಲೇ ಉತ್ಪಾದನೆಯಲ್ಲಿ ಹಿಂದೆ ಬಿದ್ದಿರುವ ಮತ್ತು ರಫ್ತು ಬೇಡಿಕೆ ಇಳಿಕೆಯಿಂದ ಸಮಸ್ಯೆಗೀಡಾಗಿರುವ ಜರ್ಮನಿ ಕಂಪನಿಗಳು ನೌಕರರ ಈ ಪ್ರವೃತ್ತಿಯಿಂದಾಗಿ ಕಂಗೆಟ್ಟಿವೆ. ನೌಕರರು ಹೇಳುತ್ತಿರುವುದು ಸತ್ಯವೋ ಸುಳ್ಳೋ ಎಂಬುದನ್ನು ಅರಿಯಲು ಬೇಹುಗಾರಿಕೆ ಸಂಸ್ಥೆಗಳ ನೆರವು ಪಡೆಯುತ್ತಿವೆ ಎಂದು ವರದಿಯಾಗಿದೆ.