

ತುಮಕೂರು: ಸ್ಮಾರ್ಟ್‌ಸಿಟಿ ವತಿಯಿಂದ ನಿರ್ಮಿಸಿರುವ ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಕ್ರೀಡಾಪಟುಗಳ ಅಭ್ಯಾಸಕ್ಕೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ಮುಂಭಾಗ ಭಾನುವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜತೆ ಸೊಗಡು ಶಿವಣ್ಣ ಪ್ರತಿಭಟನೆ ನಡೆಸಿದರು.
ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು, ಸ್ಪೋರ್ಟ್ ಕಾಂಪ್ಲೆಕ್ಸ್ ಎಂದಿಗೂ ಖಾಸಗೀಕರಣ ಮಾಡಬಾರದು ಹಾಗೂ ಎಲ್ಲ ಕ್ರೀಡೆಗಳಿಗೂ ತರಬೇತುದಾರರನ್ನು ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧೀನದಲ್ಲಿದ್ದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಸ್ಮಾರ್ಟ್‌ಸಿಟಿ ಅನುದಾನದಲ್ಲಿ ಹೊಸದಾಗಿ 68 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಂಡು 8 ತಿಂಗಳು ಕಳೆದರೂ ಕ್ರೀಡಾಪುಟಗಳ ಅಭ್ಯಾಸಕ್ಕೆ ತೆರವು ಮಾಡಿಲ್ಲ. ಜತೆಗೆ, ಕ್ರೀಡಾಂಗಣದ ಪಕ್ಕದಲ್ಲಿಯೇ ನಿರ್ಮಿಸಿರುವ 4 ಅಂತಸ್ಥಿನ ಸ್ಪೋರ್ಟ್ಸ ಕಾಂಪ್ಲೆಸ್ ಅನ್ನು ಕ್ರೀಡಾಂಗಣದ ನಿರ್ವಹಣೆಗೆ ಸಂಪನ್ಮೂಲ ಕ್ರೂಢೀಕರಣದ ಹೆಸರಿನಲ್ಲಿ ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ನೂರಾರು ಕ್ರೀಡಾಪಟುಗಳು ವಿರೋಧಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಭವಿಷ್ಯದ ಕನಸು ಕಾಣುತ್ತಿರುವ ಸಣ್ಣಸಣ್ಣ ಮಕ್ಕಳು ಕ್ರೀಡಾಂಗಣದ ಹೊರಗೆ, ಉರಿಬಿಸಿಲಿನಲ್ಲಿ ಕ್ರೀಡಾಂಗಣ ಸೌಲಭ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಿದರೆ ನಾಚಿಕೆ ಎನಿಸುತ್ತದೆ ಎಂದರು.
ಭವಿಷ್ಯದಲ್ಲಿ ಒಳ್ಳೆಯ ಕ್ರೀಡಾಪಟುವಾಗಿ, ಒಲಂಪಿಕ್‌ನಲ್ಲಿ ದೇಶಕ್ಕೆ ಪದಕ ತರಬೇಕು ಎಂಬ ಕನಸು ಹೊತ್ತಿರುವ ಮಕ್ಕಳಿಗೆ ಕಳೆದ ನಾಲ್ಕು ವರ್ಷಗಳಿಂದ ಅಭ್ಯಾಸಕ್ಕೆ ಜಾಗವಿಲ್ಲ ಎಂದರೆ ಪದಕದ ಮಾತೆಲ್ಲಿ ? ಜಿಲ್ಲಾಡಳಿತ, ಕ್ರೀಡಾ ಇಲಾಖೆ ಹಾಗೂ ಸರ್ಕಾರ ಇದನ್ನು ಅರ್ಥ ಮಾಡಿಕೊಡು ಕೂಡಲೇ ಕ್ರೀಡಾಂಗಣ ಉದ್ಘಾಟನೆ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಧನಿಯಕುಮಾರ್, ನಗರಸಭೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಮಂಜನಾಥ್, ಕೃಷಿಕ್ ಮಂಜುನಾಥ್ ಮತ್ತಿತರರು ಇದ್ದರು.
ಪ್ರತಿಭಟನೆ ಎಚ್ಚರಿಕೆ: ಕ್ರೀಡಾಪಟುಗಳ ಅನುಕೂಲಕ್ಕೆಂದು ನಿರ್ಮಿಸಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ಖಾಸಗೀಕರಣ ಮಾಡಲು ಎಂದಿಗೂ ಬಿಡುವುದಿಲ್ಲ, ಕ್ರೀಡಾಂಗಣದ ನಿರ್ವಹಣೆಗೆ ಸರ್ಕಾರದಿಂದ ಅನುದಾನ ನೀಡಲಿ ಎಂದು ಸೊಗಡು ಶಿವಣ್ಣ ಆಗ್ರಹಿಸಿದರು. ಕ್ರೀಡಾ ಸಂಸ್ಥೆಗಳಿಗೆ ಮಳಿಗೆ ಹಂಚುವ ಮೂಲಕ ಅವರಿಂದ ಬಾಡಿಗೆ ವಸೂಲಿ ಮಾಡಲಿ, ಬದಲಾಗಿ ಒಂದೇ ಸಂಸ್ಥೆಗೆ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಕಾಂಪ್ಲೆಕ್ಸ್ ನೀಡುವುದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಒಂದು ವೇಳೆ ಕ್ರೀಡಾಪಟುಗಳ ವಿರೋಧದ ನಡುವೆಯೋ ಖಾಸಗಿಯವರಿಗೆ ವಹಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಶಾಸಕರ ಕಾಲಿಗೆ ಬಿದ್ದರೂ ಪ್ರಯೋಜನವಾಗಿಲ್ಲ: ಶಾಸಕ ಜಿ.ಬಿ.ಜೋತಿಗಣೇಶ್ ಕ್ರೀಡಾಪಟುಗಳನ್ನು ಬದ್ಧ ವೈರಿಗಳಂತೆ ಭಾವಿಸಿದ್ದಾರೆ. ಕ್ರೀಡಾಂಗಣದಲ್ಲಿ ನಮಗೆ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಿ ಎಂದು ಹಲವಾರು ಬಾರಿ ನಾನು ಸೇರಿ ಕ್ರೀಡಾಪಟುಗಳು ಅವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದೇವೆ. ಆದರೆ ಇದುವರೆಗೂ ಮನವಿಗೆ ಸ್ಪಂದಿಸಿಲ್ಲ ಎಂದು ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಅನಿಲ್ ಹೇಳಿದರು.
ಸ್ಪೋರ್ಟ್ ಕಾಂಪ್ಲೆಕ್ಸ್ ಅನ್ನು ಖಾಸಗೀಕರಣ ಮಾಡಲು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ, ಇದರ ಹಿಂದೆ ಯಾವ ಉದ್ದೇಶವಿದೆಯೋ ಗೊತ್ತಿಲ್ಲ. ಕಬಡ್ಡಿ, ವಾಲಿಬಾಲ್, ಪುಟ್‌ಬಾಲ್, ಬ್ಯಾಸ್ಕಟ್‌ಬಾಲ್, ಟೆಕಾಂಡೋ, ಕರಾಟೆ, ಶೂಟಿಂಗ್, ಟೆನ್ನಿಸ್, ಟೇಬಲ್ ಟೆನ್ನಿಸ್ ಸೇರಿ ಎಲ್ಲ ಕ್ರೀಡೆಗಳಿಗೂ ಅಭ್ಯಾಸಕ್ಕೆ ಕ್ರೀಡಾಂಗಣದ ಅವಶ್ಯಕತೆಯಿದೆ ಎಂದರು.
ಅಭ್ಯಾಸಕ್ಕೆ ಅಂಕಣವೇ ಇಲ್ಲ: ಶೂಟಿಂಗ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು, ಒಲಂಪಿಕ್‌ಗೆ ಅಭ್ಯಾಸದಲ್ಲಿ ತೊಡಗಿರುವ ಕಿರಣ್ ನಂದನ್ ಮಾತನಾಡಿ, ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ನನಗೆ ಸಕಾರವೇ 10 ಲಕ್ಷ ರೂ. ನೀಡಿ, ಒಲಂಪಿಕ್‌ಗೆ ತಯಾರಿ ನಡೆಸುವಂತೆ ಸೂಚನೆ ನೀಡಿದೆ ಎಂದರು. ತುಮಕೂರು ನಗರದಲ್ಲಿ ಅಭ್ಯಾಸಕ್ಕೆ ಅಂಕಣವೇ ಇಲ್ಲ, ಅಭ್ಯಾಸಕ್ಕೆ ಒಂದು ಕಡೆ, ಪಿಟ್ನೆಸ್‌ಗೆ ಒಂದು ಕಡೆ ಎಂದು ಹೋಗಲು ಆಗುವುದಿಲ್ಲ. ಕ್ರೀಡಾಂಗಣ ಒಪನ್ ಆದರೆ ಎರಡು ಒಂದೇ ಕಡೆ ಇರುವದರಿಂದ ಹೆಚ್ಚಿನ ಒತ್ತು ನೀಡಬಹುದು, ಆದ್ದರಿಂದ ಜಿಲ್ಲಾಡಳಿತ, ಶಾಸಕರು ಇತ್ತ ಗಮನ ಹರಿಸಬೇಕು ಎಂದರು.