ಕ್ರೀಡೆ ದೈಹಿಕ ಸಾಮರ್ಥ್ಯ ಹೆಚ್ಚಿಸಿ, ಚೈತನ್ಯ ಮೂಡಿಸಲಿದೆ

12 CRP-1A.
ಚನ್ನರಾಯಪಟ್ಟಣ ತಾಲೂಕಿನ ಕ್ರೀಡಾಂಗಣದಲ್ಲಿ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಅಥ್ಲೆಟಿಕ್ ಜಿ.ಕೆ.ವಿಜಯಕುಮಾರಿ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಸನ್ಮಾನಿಸಿದರು. ಯು.ಕೆ. ಮಂಜೇಗೌಡ, ಭರತ್ ರಾಜ್, ಸಿ.ಎನ್.ವೀಣಾ ಕೆ.ಟಿ.ಆನಂದ್ ಸೇರಿದಂತೆ ಇತರರಿದ್ದರು.
Published on

ಚನ್ನರಾಯಪಟ್ಟಣ: ಕ್ರೀಡೆಯು ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಜೀವನದಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಮುನ್ನಡೆಯಬೇಕಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿ ಹಾಸನ ಹಾಗೂ ಸಿಂಹಾದ್ರಿ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು, ಉತ್ತೇನಹಳ್ಳಿ ಸಹಯೋಗದಲ್ಲಿ 2025-26ನೇ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನ ಕ್ರೀಡಾಂಗಣದ ಅಭಿವೃದ್ಧಿಗೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಇಂದು ಸಾಧನೆ ಮಾಡಿದವರಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತಿವೆ. ಕ್ರೀಡೆ ಎನ್ನುವಂತಹದ್ದು ಒಂದು ಶಕ್ತಿ ಮತ್ತು ಸ್ಫೂರ್ತಿಯಾಗಿದೆ. ಇದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ನಮಗೆ ಸಿಗುವಂತಹ ಕ್ರೀಡಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಮುಂದೆ ಉತ್ತಮ ಕ್ರೀಡಾಪಟುವಾಗಿ ಬೆಳೆದು ಬರಲು ಸಾಧ್ಯ ಎಂದರು.

ಕ್ರೀಡಾಂಗಣಗಳು ಅನುದಾನದ ಕೊರತೆಯಿಂದಾಗಿ ಕ್ರೀಡಾಪಟುಗಳ ಆಟೋಟಕ್ಕೆ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ಸಿಗುತ್ತಿಲ್ಲ, ಸರ್ಕಾರದ ಕ್ರೀಡಾ ಇಲಾಖೆಗೆ ನೀಡುತ್ತಿರುವ ಕಡಿಮೆ ಅನುದಾನದಿಂದ ಕ್ರೀಡಾಂಗಣಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಸರ್ಕಾರ 500 ಕೋಟಿ ರೂ. ಅನುದಾನವನ್ನು ಕ್ರೀಡಾ ಇಲಾಖೆಗೆ ಮೀಸಲಿಟ್ಟರೆ ವ್ಯವಸ್ಥಿತವಾದ ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ತಾಲೂಕಿನ ಪ್ರತಿಭೆಗಳಾದ ಅಂತಾರಾಷ್ಟ್ರೀಯ ಅಥ್ಲೆಟಿಕ್ ಜಿ.ಕೆ.ವಿಜಯ ಕುಮಾರಿ ಹಾಗೂ ರಾಷ್ಟ್ರೀಯ ಯೋಗಪಟು ಋತ್ವಿ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಆನಂದ್ ದಿಂಡಗೂರು, ಒಳಗೇರಹಳ್ಳಿ ಮಂಜುನಾಥ್, ಪರಮ ಕೃಷ್ಣೇಗೌಡ, ಪ್ರವೀಣ್, ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ರಾಮೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್, ಸಿಂಹಾದ್ರಿ ಶಿಕ್ಷಣ ಸಂಸ್ಥೆಯ ಖಜಾಂಚಿ ಭರತ್‌ರಾಜ್, ಪ್ರಾಂಶುಪಾಲೆ ಸಿ.ಎನ್.ವೀಣಾ ಸೇರಿದಂತೆ ಕ್ರೀಡಾಪಟುಗಳು ಹಾಗೂ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಣಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net