

ಶಿವಮೊಗ್ಗ: ಪ್ರತಿ ದಿನ ಬೆಳಗ್ಗೆಯಿಂದಲೇ ನಗರದ ನೈರ್ಮಲ್ಯ ಕಾಪಾಡಲು ಬೆವರು ಹರಿಸುವ ನಗರ ಪಾಲಿಕೆ ಪೌರ ಕಾರ್ಮಿಕರ ಮಂಗಳವಾರದ ದಿನಚರಿ ಭಿನ್ನವಾಗಿತ್ತು. ನಿತ್ಯದ ಜಂಜಾಟದಿಂದ ಹೊರ ಬಂದು ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿದರು.
ಗೆಲುವಿಗಾಗಿ ಉತ್ಸಾಹದಿಂದ ಆಟವಾಡಿದರು. ಸಹೋದ್ಯೋಗಿ ಗೆದ್ದಾಗ ಆತನನ್ನು ಅಭಿನಂದಿಸಿ ಕ್ರೀಡಾ ಸ್ಪೂರ್ತಿ ಮೆರೆದರು. ಕಳೆದ ಎರಡು ವರ್ಷಗಳಿಂದ ಖುಷಿ ಕಸಿದುಕೊಂಡಿದ್ದ ಕರೊನಾವನ್ನು ಶಪಿಸುತ್ತಾ ಕ್ರೀಡಾಂಗಣದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು.
ಕರೊನಾ ಸಂದರ್ಭದಲ್ಲಿ ಪೌರ ಕಾರ್ಮಿಕರ ಪ್ರವಾಸ ಹಾಗೂ ಕ್ರೀಡಾಕೂಟಕ್ಕೆ ಅವಕಾಶವಿರಲಿಲ್ಲ. ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಸದಾ ನಗರದ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಸುನೀತಾ ಅಣ್ಣಪ್ಪ ಹೇಳಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲೂ ಕುಟುಂಬದವರೊಂದಿಗೆ ಕಾಲ ಕಳೆಯದೇ ನಗರದ ಸ್ವಚ್ಛತೆಗಾಗಿ ದುಡಿಯುವ ಪೌರ ಕಾರ್ಮಿಕರು ಒತ್ತಡದಲ್ಲಿರುತ್ತಾರೆ. ಈ ನಿಟ್ಟಿನಲ್ಲಿ ಕೆಲ ಸಮಯ ಅವರು ಸಂತೋಷದಿಂದ ಕಾಲ ಕಳೆಯಲು ಕ್ರೀಡಾಕೂಟ ವೇದಿಕೆಯಾಗಿದೆ ಎಂದರು.
ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸಲು ಪೌರ ಕಾರ್ಮಿಕರು ಭಾನುವಾರ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಾರೆ. ಕ್ರೀಡಾಕೂಟಕ್ಕಾಗಿ ಪೌರ ಕಾರ್ಮಿಕರು ತಮ ಜವಾಬ್ದಾರಿ ಮರೆತಿಲ್ಲ. ಸೆ.17ರಂದು ಪಾಲಿಕೆ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಪೌರ ಕಾರ್ಮಿಕರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು.