ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ

tth sports
ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
Published on

ತೀರ್ಥಹಳ್ಳಿ: ನಾಯಕತ್ವ ಗುಣದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕ್ರೀಡೆ ಮೊದಲ ಮೆಟ್ಟಿಲು. ಕ್ರೀಡಾಪಟುಗಳು ಸಾಧನೆ ಮತ್ತು ನಡತೆಯಿಂದ ದೇಶದ ಕೀರ್ತಿ ಪತಾಕೆ ಹಾರಿಸುವ ಪ್ರತಿಭೆಗಳಾಗಿಯೂ ಹೊರಹೊಮ್ಮಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕೋಣಂದೂರಿನ ರಾಷ್ಟ್ರೀಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕೋಣಂದೂರಿನಲ್ಲಿ ಪ್ರೌಢಶಾಲೆ ಮತ್ತು ಪದವಿ ಕಾಲೇಜನ್ನು ತೆರೆಯದಿದ್ದರೆ ನನ್ನಂತಹ ನೂರಾರು ಮಂದಿಯ ಶಿಕ್ಷಣ ಪ್ರಾಥಮಿಕ ಹಂತದಲ್ಲೇ ಕೊನೆಯಾಗುತ್ತಿತ್ತು. ಈ ಸಂಸ್ಥೆ ನನ್ನನ್ನು ಸೇರಿ ಈ ಭಾಗದ ನೂರಾರು ಬಡ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದೆ ಎಂದರು.
ಆರಂಭಿಕ ಹಂತದ ಕ್ರೀಡಾಕೂಟಗಳನ್ನು ಮಳೆಗಾಲದ ಅವಧಿಯಲ್ಲೇ ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದಾರೆ. ಈ ಅವಧಿಯಲ್ಲಿ ಕ್ರೀಡಾಂಗಣ ಕೆಸರಾಗಿರುತ್ತದೆ. ಹೀಗಾಗಿ ಮಲೆನಾಡು ಮತ್ತು ಕರಾವಳಿ ಭಾಗದ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸನ್ನಡತೆ, ವ್ಯಕ್ತಿತ್ವದೊಂದಿಗೆ ಮನೋಸ್ಥೈರ್ಯ ರೂಪಿಸುವ ಕ್ರೀಡೆ ಮನುಷ್ಯ ಮಾತ್ರವಲ್ಲದೇ ಎಲ್ಲ ಜೀವಿಗಳಿಗೂ ಬದುಕಿನ ಭಾಗವಾಗಿದೆ. ನಾವೇ ತಪ್ಪು ಮಾಡಿದಾಗ ವಕೀಲರಂತೆ ವಾದ ಮಾಡುತ್ತೇವೆ. ಬೇರೆಯವರು ತಪ್ಪು ಮಾಡಿದಾಗ ನ್ಯಾಯಾಧೀಶರಂತೆ ವರ್ತಿಸುತ್ತೇವೆ. ಕ್ರೀಡಾಪಟುಗಳು ಬದುಕು ನ್ಯಾಯಾಧೀಶರಂತೆ ಇರಬೇಕು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಕೋಣಂದೂರು ಗ್ರಾಪಂ ಅಧ್ಯಕ್ಷ ಮಂಗಳ ಗೋಪಿ ಮಾತನಾಡಿದರು. ರಾಷ್ಟ್ರೀಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎಸ್.ವಾಸುದೇವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net