ಕ್ರೀಡೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ

13spt3
ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.
Published on

ಸೋಮವಾರಪೇಟೆ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಗಣಗೂರು ವತಿಯಿಂದ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯನ್ನು ಗ್ರಾಮದಲ್ಲಿ ಇತ್ತೀಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪುರುಷರಿಗೆ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್, ಮಹಿಳೆಯರಿಗೆ ಮುಕ್ತ ಥ್ರೋಬಾಲ್, ಗ್ರಾಮೀಣ ಕ್ರೀಡೆಗಳಾದ ನೀರಿನ ನಡಿಗೆ, ರಂಗೋಲಿ ಸ್ಪರ್ಧೆ ನಡೆಯಿತು. ಪ್ರಾಥಮಿಕ ಶಾಲೆ ಮಕ್ಕಳಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು.

ಕ್ರೀಡಾಕೂಟವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮನುಷ್ಯನ ದೈಹಿಕ, ಮಾನಸಿಕ ಅರೋಗ್ಯಕ್ಕೆ ಉಪಯೋಗವಾಗಲಿದೆ. ಗ್ರಾಮೀಣ ಭಾಗದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ. ಮಕ್ಕಳು ಮತ್ತು ಯುವ ಸಮುದಾಯ ಮೊಬೈಲ್‌ನೊಂದಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡುತ್ತಿದ್ದಾರೆ. ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಎಲ್ಲವೂ ಮಿತಿಯಲ್ಲಿರಬೇಕು. ಕಲಿಕೆಗೆ ಮಾತ್ರ ಮೊಬೈಲ್ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಕ್ರಿಕೆಟ್ ಪ್ರಶಸ್ತಿಯನ್ನು ಮುಳ್ಳುಸೋಗೆ ಕನ್ನಂಬಾಡಮ್ಮ ತಂಡ ಮುಡಿಗೇರಿಸಿಕೊಂಡಿತು. ಆಕರ್ಷಕ ಟ್ರೋಫಿಯೊಂದಿಗೆ 25 ಸಾವಿರ ರೂ.ಗಳ ನಗದು ಪಡೆದುಕೊಂಡಿತು. ಉಂಜಿಗನಹಳ್ಳಿ ಬಾಯ್ಸ ತಂಡ ದ್ವಿತೀಯ, ಅಬ್ಬೂರುಕಟ್ಟೆ ಯಂಗ್ ಸ್ಟಾರ್ ತಂಡ ತೃತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಪ್ರಥಮ ಬಹುಮಾನವನ್ನು ಜೈ ಭೀಮ್ ತಂಡ ಪಡೆದುಕೊಂಡರೆ. ದ್ವಿತೀಯ ಬಹುಮಾನವನ್ನು ಯಂಗ್ ಸ್ಟಾರ್ ತಂಡ ಪಡೆಯಿತು.

ಸೋಮವಾರ ಅಂಬೇಡ್ಕರ್ ಸ್ತಬ್ಧಚಿತ್ರದೊಂದಿಗೆ ಗೋಣಿಮರೂರು ಗ್ರಾಮದಿಂದ ಗಣಗೂರಿನ ಗ್ರಾಮದ ತನಕ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ವಾದ್ಯಗೋಷ್ಠಿ ಜನರನ್ನು ಆಕರ್ಷಿಸಿತು. ಸಮಾರೋಪ ಸಮಾರಂಭದಲ್ಲಿ ದಲಿತಪರ ಹೋರಾಟಗಾರ ಜಯಪ್ಪ ಹಾನಗಲ್, ಶಿಕ್ಷಕ ಆರ್.ಡಿ.ಲೋಕೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯ ಅಧಿಕಾರಿ ಶೈಲೇಂದ್ರ, ವಕೀಲರಾದ ಬಿ.ಈ.ಜಯೇಂದ್ರ, ಪ್ರಮುಖರಾದ ಡಿ.ಎಸ್.ನಿರ್ವಾಣಪ್ಪ, ಚಂದ್ರಶೇಖರ್, ಜಿ.ಎಸ್.ಮೋಹನ್ ಮೌರ್ಯ, ದುಶ್ಯಂತ್ ಕುಮಾರ್ ಇದ್ದರು. ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net