

ಪಿರಿಯಾಪಟ್ಟಣ: ವಿದ್ಯಾರ್ಥಿಗಳನ್ನು ಪರಿಪೂರ್ಣತೆಯೊಂದಿಗೆ ಕರೆದೊಯ್ಯುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಪುಷ್ಪ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2023-24 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಕ್ರಿಯಾಶೀಲ ಕಲಿಕೆಗೆ ಸಹಕಾರಿಯಾಗಲಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾದ ವಾತಾವರಣ ಕಲ್ಪಿಸುವುದು ಶಾಲೆ ಮತ್ತು ಪಾಲಕರ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎನ್ನುವ ಧಾವಂತದಲ್ಲಿದ್ದು, ಅವರಿಗೆ ಪಾಲಕರ ಸಹಕಾರ ಅಗತ್ಯವಾಗಿದೆ. ಮುಂದುವರಿಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿರುವ ಭಾರತಕ್ಕೆ ಬಹುಮುಖ್ಯ ಆಸ್ತಿ ವಿದ್ಯಾರ್ಥಿಗಳಾಗಿದ್ದು, ವಿದೇಶಗಳಿಗೆ ಉದ್ಯೋಗವನ್ನರಸಿ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದರು.
ಪುಷ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾದರ್ ಡಾ.ಫಿಲಿಪ್ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಹತ್ವ ತಿಳಿಯಲಿದೆ ಎಂದರು.
ಸಮಾರಂಭದಲ್ಲಿ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 2022-23 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಮತ್ತು ನೃತ್ಯ ಚಟುವಟಿಕೆಗಳು ಪ್ರೇಕ್ಷಕರ ಮನರಂಜಿಸಿದವು. ಶಾಲೆಯ ಆಡಳಿತ ವ್ಯವಸ್ಥಾಪಕ ಫಾದರ್ ಥಾಮಸ್, ಆಡಳಿತ ವ್ಯವಸ್ಥಾಪಕ ಫಾದರ್ ಡೀನ್ಸ್, ಶಿಕ್ಷಕರಾದ ಮಂಜುನಾಥ್, ಪ್ರವೀಣ್, ಜೈನಾಬ್, ಗೀತಾ, ಸ್ವಾತಿ, ಭಾರತಿಬಾಯಿ, ಶ್ರೀನಿವಾಸ್, ರವೀಂದ್ರ, ಚರಣ್, ಕಿರಣ್, ಸರಿತಾ ಮತ್ತಿತರರು ಉಪಸ್ಥಿತರಿದ್ದರು.