

ಬೆಂಗಳೂರು: ಕೊವಿಡ್-19 ತಡೆಗಟ್ಟುವ ಕ್ರಮವಾಗಿ ರಾಜ್ಯ ಸರ್ಕಾರ ಇನ್ನೊಂದು ಪ್ರಮುಖ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್ ಮಸಾಲ ಸೇವಿಸುವುದು, ಉಗುಳುವುದನ್ನು ನಿಷೇಧಿಸಿದೆ.
ತಂಬಾಕು, ಪಾನ್ ಮಸಾಲಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಕೊವಿಡ್-19 ಸೇರಿ ಬೇರೆ ಕೆಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಇನ್ನು ಮುಂದೆ ಪಬ್ಲಿಕ್ ಪ್ಲೇಸ್ಗಳಲ್ಲಿ, ಕಂಡಕಂಡಲ್ಲಿ ಪಾನ್, ತಂಬಾಕನ್ನು ಉಗಿಯುವಂತಿಲ್ಲ.
ಹಾಗಂತ ಮಾರಾಟವೇನೂ ಬಂದ್ ಆಗಿಲ್ಲ. ಒಮ್ಮೆ ಯಾರಾದರೂ ಆದೇಶವನ್ನು ಉಲ್ಲಂಘನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್ಮಸಾಲಗಳನ್ನು ಸೇವಿಸುವುದು, ಉಗಿಯುವುದು ಮಾಡಿದರೆ ಅಂಥವರ ವಿರುದ್ಧ ಐಪಿಸಿ ಸೆಕ್ಷನ್ 188, 268, 269, 270 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.