

ಯಲಬುರ್ಗಾ: ಪ್ರತಿಯೊಬ್ಬರೂ ಆಧ್ಯಾತ್ಮಿಕ ಬದುಕಿನತ್ತ ಒಲವು ತೋರುವುದರಿಂದ ಜೀವನ ನೆಮ್ಮದಿಯಾಗಿರುತ್ತದೆ ಎಂದು ತಾಳಿಕೋಟಿ ವಿಭೂತಿಮಠದ ಮಹಾಂತ ದೇವರು ಹೇಳಿದರು.
ತಾಲೂಕಿನ ಮ್ಯಾದನೇರಿ ದ್ಯಾಮಾಂಭಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಪ್ರಾರಂಭಿಸಲಾದ ದ್ಯಾಮಾಂಭಿಕಾದೇವಿ 13ನೇ ವರ್ಷದ ಪುರಾಣ ಮಹೋತ್ಸವದಲ್ಲಿ ಭಾನುವಾರ ಮಾತನಾಡಿದರು.
ಮಹಾತ್ಮರ ಜೀವನ ಚರಿತ್ರೆ ಕುರಿತ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ತಾಯಂದಿರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಜನಪದ ಅಕಾಡೆಮಿ ಮಾಜಿ ಸದಸ್ಯ ಎಚ್.ಚಂದ್ರಶೇಖರ ಲಿಂಗದಹಳ್ಳಿ, ತಬಲಾ ವಾದಕ ಅಯ್ಯಪ್ಪ ಬಡಿಗೇರ್ ಸಂಗೀತ ಸೇವೆಗೈದರು. ದ್ಯಾಂಬಿಕಾದೇವಿ ಸೇವಾ ಸಮಿತಿ ಸದಸ್ಯರು ಹಾಗೂ ಭಕ್ತರು ಇದ್ದರು.