

ಚನ್ನರಾಯಪಟ್ಟಣ: ಭರತ ಖಂಡದ ಆಧ್ಯಾತ್ಮಿಕ ಗ್ರಂಥಗಳು ವಿಶ್ವಕ್ಕೆ ಮಾರ್ಗದರ್ಶಕಗಳಾಗಿವೆ. ಅದರಲ್ಲಿಯೂ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಪ್ರಪಂಚದ ಎಲ್ಲ ಜನಾಂಗದವರೂ ಅನುಸರಿಸುವ ಮಹೋನ್ನತ ಮಾನವೀಯ ಮೌಲ್ಯ ಹೊಂದಿವೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಭದ್ರಾವತಿ ರಾಮಾಚಾರಿ ಅವರ ಸಾರಥ್ಯದಲ್ಲಿ ಹೊಳೆನರಸೀಪುರ ಪಟ್ಟಣದ ಹಿರಿಯ ಸಾಹಿತಿ ಕೌಂಡಿನ್ಯ ಇವರ ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಇಂದು ಮೂರು ಮಹಾಭಾರತದ ಕೃತಿಗಳನ್ನು ಮತ್ತು ಒಂದು ಮನೋವೈಜ್ಞಾನಿಕ ಕೃತಿಯನ್ನು ಕೌಂಡಿನ್ಯ ಅವರು ಅನಾವರಣ ಮಾಡಿದ್ದಾರೆ. ರಾಮಾಯಣಕ್ಕೆ ಒಂದು ಶಕ್ತಿ ಇದೆ. ಇವೆರಡು ಮಹಾಕಾವ್ಯಗಳು ಜಗತ್ತಿನ ಯಾವ ಮಹಾ ಕಾವ್ಯಗಳಲ್ಲೂ ಇಲ್ಲದೇ ಇರತಕ್ಕಂತಹ ಆಳವಾದ ಸತ್ವವನ್ನು ಹೊಂದಿವೆ ಎಂದರು.
ನಟ, ನಿರ್ದೇಶಕ ಎಸ್. ನಾರಾಯಣ ಸಾಧಕರಿಗೆ ಸನ್ಮಾನಿಸಿ ಮಾತನಾಡಿ, ಯಾರು ಬರವಣಿಗೆ ಕಲಿಯುತ್ತಾರೋ ಅವರು ಬಡವ ಆಗಲಿಕ್ಕೆ ಸಾಧ್ಯವಿಲ್ಲ. ಅವರು ಎಲ್ಲ ವಿಷಯದಲ್ಲೂ ಶ್ರೀಮಂತನಾಗುತ್ತಾನೆ. ರಾಮಾಚಾರಿ ಅವರು ಅನ್ವೇಷಣೆ ಅಕಾಡೆಮಿ ಮೂಲಕ ಸತ್ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ಭಗವಂತ ಬರವಣಿಗೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ. ಹಲವಾರು ಕೃತಿಗಳನ್ನು ರಚಿಸಲಿ. ಎಲೆಮರೆ ಕಾಯಿಯಂತೆ ಇರುವವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಚನ್ನರಾಯಪಟ್ಟಣದ ಕಲಾವಿದ ಸಿ.ಆರ್.ಉಮೇಶ್ ಅವರಿಗೆ ಸಂಗೀತದ ಹಲವು ವಿಭಾಗಗಳಲ್ಲಿ ಸೇವೆ ಮಾಡಿರುವುದನ್ನು ಪರಿಗಣಿಸಿ ವಿಜಯ ಭಾಸ್ಕರ್ ಸಂಗೀತ ರಾಜ್ಯ ಪ್ರಶಸ್ತಿಯನ್ನು ನಿರ್ದೇಶಕ ಎಸ್.ನಾರಾಯಣ ನೀಡಿ, ಸನ್ಮಾನಿಸಿದರು.
ಹಿರಿಯ ಪತ್ರಕರ್ತ ಎಚ್.ಬಿ.ಮದನಗೌಡ, ಹೊಳೆನರಸೀಪುರರದ ಹಿರಿಯ ಸಾಹಿತಿ ಕೌಂಡಿನ್ಯ, ಹೊಳೆನರಸೀಪುರದ ಉದ್ಯಮಿ ಗಿರೀಶ್ ಹಾಗೂ ಇತರರನ್ನು ಅನ್ವೇಷಣೆ ಅಕಾಡೆಮಿ ವತಿಯಿಂದ ಸಂಸ್ಥಾಪಕ ಭದ್ರಾವತಿ ರಾಮಾಚಾರಿ ಮತ್ತು ಅವರ ಪತ್ನಿ ಸುಮಾಲಿನಿ ಸನ್ಮಾನಿಸಿ ಗೌರವಿಸಿದರು.