ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ವೇಗ: ಒಡೆಯರ್ ನಿರೀಕ್ಷೆ | Wodeyar met CM

Wodeyar met CM
Published on

ಬೆಂಗಳೂರು: ಮೈಸೂರು ವಿಮಾನ ನಿಲ್ದಾಣ, ಅಭಿವೃದ್ಧಿ ಸಂಬಂಧ ಅನೇಕ ಸಮೀಕ್ಷೆಗಳಾಗಿವೆ. ರಾಜ್ಯ ಸರ್ಕಾರವೇ ಮುಂದುವರಿದು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿದರೆ ಅಭಿವೃದ್ಧಿಗೆ ವೇಗ ನೀಡಲು ಸಾಧ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿರುವೆ ಎಂದು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ತಿಳಿಸಿದರು.

ಸಿಎಂಗೆ ಭೇಟಿಯಾಗಿ ಮಾತುಕತೆ ನಡೆಸಿದ್ದರ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನೀರಾವರಿ ಯೋಜನೆಗಳು, ಕೆಪಿಟಿಸಿಎಲ್ ವಿದ್ಯುತ್ ಪ್ರಸರಣ ಮಾರ್ಗದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿರುವೆ ಎಂದರು.

ಮೈಸೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಜಮೀನು ಸ್ವಾಧೀನ ಸಮಸ್ಯೆಯಿದೆ. ಈ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿದ್ದು, ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ರಸ್ತೆಗೆ ಹೆಸರು ಚರ್ಚಿಸಿಲ್ಲ

ಮೈಸೂರು ಲೋಕಸಭೆ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆಗೆ ಸಿಎಂ ಭೇಟಿ ಸೀಮಿತವಾಗಿತ್ತು. ಪ್ರಿನ್ಸೆಸ್ ರಸ್ತೆಗೆ ಮೂಲ ಹೆಸರು ಪ್ರಿನ್ಸೆಸ್ ಎಂದೇ ಇರಲಿ ಎಂದು ಜಿಲ್ಲಾ ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಈ ಬಗ್ಗೆ ಸಿಎಂ ಜತೆಗೆ ಚರ್ಚಿಸಿಲ್ಲ.

ಮಹಾರಾಜರು ತಮ್ಮ ತಂಗಿ ಕೃಷ್ಣರಾಮ್ಮಣಿ ನೆನಪಿನಲ್ಲಿ ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಹೆಸರಿಸಿದ್ದು, ಟಿಬಿ ಸ್ಯಾನಿಟೋರಿಯಂ ಕೂಡ ನಿರ್ಮಿಸಿದ್ದಾರೆ. ಪ್ರಿನ್ಸೆಸ್ ರಸ್ತೆಗೆ ಮರುನಾಮಕರಣಕ್ಕೆ ವಿರೋಧ, ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಜನಪರ ನಿಲ್ಲುವೆವು

ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಸರಣಿ ಬಯಲಾಗುತ್ತಿದ್ದು, ಒಂದು ಕಪ್ಪುಚುಕ್ಕೆಯಾಗಿದೆ. ಬೆಲೆ ಏರಿಕೆಯಿಂದ ಜನರ ತತ್ತರಿಸಿದ್ದು, ಅಂಗನವಾಡಿ ಕಾರ್ಯಕತೆರ್ಯರಿಗೆ ವೇತನ ಸಿಗುತ್ತಿಲ್ಲ.

ಕಾಂಗ್ರೆಸ್ ಸರ್ಕಾರದ ದುರಾಡಳಿತ, ಜನ ವಿರೋಧಿ ನಿರ್ಧಾರಗಳ ವಿರುದ್ಧ ವಿಪಕ್ಷವಾಗಿ ಹೋರಾಟ ಮಾಡಿ, ಜನಪರವಾಗಿ ನಿಲ್ಲುತ್ತೇವೆ ಎಂದು ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net