

ಬೆಂಗಳೂರು: ಅನಗತ್ಯ ಹುದ್ದೆಗಳ ಕಡಿತ, ಇಲಾಖೆಗಳ ವಿಲೀನ, ಜನಸಾಮಾನ್ಯರಿಗೆ ಸರ್ಕಾರಿ ಸೇವೆ ತಲುಪಿಸುವಲ್ಲಿ ಆಗುವ ಲೋಪಗಳಿಗೆ ಇಲಾಖೆ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸುವುದು, ಏಕಗವಾಕ್ಷಿಯಲ್ಲಿ 800 ಸೇವೆಗಳು ಸಿಗುವಂತೆ ಮಾಡುವುದು, ಮಿತವ್ಯಯ, ಕೆಳಹಂತದಲ್ಲಿಯೂ ಇ -ಆಫೀಸ್ ವ್ಯವಸ್ಥೆ ಸೇರಿದಂತೆ ಆಡಳಿತ ಸುಧಾರಣೆಗೆ ಹೊಸ ಸ್ಪರ್ಶ ನೀಡುವ ಮಹತ್ಕಾರ್ಯಕ್ಕೆ ರಾಜ್ಯ ಸರ್ಕಾರ ಸಜ್ಜಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನ.1ರಿಂದ ಆಡಳಿತ ಸುಧಾರಣೆ ಜಾರಿಗೆ ತರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಅದಕ್ಕೆ ಪೂರಕವಾಗಿ ಏನೇನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ. ಅದಕ್ಕಾಗಿಯೇ ಆಡಳಿತ ಸುಧಾರಣಾ ಇಲಾಖೆ ಸರಣಿ ಸಭೆ ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ವರ್ಚಸ್ಸು ತಗ್ಗಿದ್ದು, ಅಧಿಕಾರಿಗಳು ಆಡಳಿತಕ್ಕೆ ಸ್ಪಂದಿಸುತ್ತಿಲ್ಲ. ಜಿಡ್ಡುಗಟ್ಟಿರುವ ವ್ಯವಸ್ಥೆಯನ್ನು ಸರಿದಾರಿಗೆ ತರುವುದಕ್ಕೆ ಪೂರಕವಾಗಿ ಸರ್ಕಾರವೇ ಸುಧಾರಣಾ ಕ್ರಮ ಕೈಗೊಳ್ಳಲೇಬೇಕಾಗಿದೆ. ಆ ಕಾರ್ಯಕ್ಕೆ ತಿಂಗಳಿನಿಂದ ಚಾಲನೆ ನೀಡಲಾಗಿದೆ.
ಹುದ್ದೆಗಳ ಕಡಿತ ನಿಶ್ಚಿತ: ಅನವಶ್ಯಕ ಹುದ್ದೆಗಳನ್ನು ಅವಶ್ಯಕತೆ ಇರುವ ಕಡೆ ಬಳಸುವ ಕಾರ್ಯಕ್ಕೆ ಮುಂದಾಗಬೇಕೆಂಬ ಅಭಿಪ್ರಾಯ ಇರುವ ಸಂದರ್ಭದಲ್ಲಿಯೇ, ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೀಡಿರುವ ಆಡಳಿತ ಸುಧಾರಣೆಯ ಮೊದಲ ವರದಿ ಜಾರಿಗೆ ನಿರ್ಧರಿಸಲಾಗಿದೆ. ಆ ಮೂಲಕ ಅನವಶ್ಯಕ ಹುದ್ದೆಗಳ ಕಡಿತಕ್ಕೆ ಸರ್ಕಾರ ಮುಂದಾಗುತ್ತಿದೆ. ಆದರೆ ಸರ್ಕಾರದಲ್ಲಿರುವ ಖಾಲಿ ಹುದ್ದೆಗಳನ್ನೇ ಅನಶ್ಯಕವೆಂದು ಗುರುತಿಸುವ ಅಪಾಯ ಇದೆ ಎಂದೇ ಹೇಳಲಾಗುತ್ತಿದೆ. ಸರ್ಕಾರ ಅನಗತ್ಯ ವೆಚ್ಚ ಕಡಿತದ ನೆಪದಲ್ಲಿ ಅನವಶ್ಯಕ ಹುದ್ದೆ ರದ್ದು ಮಾಡುವ ಉದ್ದೇಶದಿಂದ ಅಂತಹವುಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ. ಡಿಪಿಎಆರ್ನ ಆಡಳಿತ ಸುಧಾರಣೆ ವಿಭಾಗ ಇಲಾಖಾವಾರು ಸರಣಿ ಸಭೆಗಳನ್ನು ಅದೇ ಕಾರಣಕ್ಕಾಗಿ ನಡೆಸಲಾಗುತ್ತಿದೆ.
ಎಷ್ಟು ನೌಕರರಿರಬೇಕು?: ಲಕ್ಷ ಜನಸಂಖ್ಯೆಗೆ 850 ಸರ್ಕಾರಿ ನೌಕರರು ಇರಬೇಕು. ಆದರೆ ಈ ಪ್ರಮಾಣ ಶೇ.50 ಇಲ್ಲ. ಇರುವ ಹುದ್ದೆಗಳನ್ನು ಅನವಶ್ಯಕ ಎಂದು ಗುರುತಿಸಿದರೆ ನಿರುದ್ಯೋಗಿಗಳಿಗೆ ಸರ್ಕಾರಿ ಹುದ್ದೆಗಳೇ ಸಿಗದಿರುವ ಮಟ್ಟಕ್ಕೆ ಪರಿಸ್ಥಿತಿ ಬರಲಿದೆ ಎಂಬ ಭಯವೂ ಆವರಿಸುತ್ತಿದೆ.
ಸರ್ಕಾರ ಯಾವುದೇ ಸುಧಾರಣೆ ಕ್ರಮ ಕೈಗೊಂಡರೂ ನಾವೇನು ವಿರೋಧಿಸುವುದಿಲ್ಲ. ಆದರೆ ಸರ್ಕಾರ ಗುರುತಿಸುತ್ತಿರುವ ಹುದ್ದೆಗಳನ್ನು ಅನುಪಯುಕ್ತ ಎನ್ನುವುದಕ್ಕಿಂತ ಉಪಯುಕ್ತ ಮಾಡುವ ಕಡೆ ಗಮನ ಹರಿಸಬೇಕು. ಸರ್ಕಾರಕ್ಕೆ ಆದಾಯ ತರುವ ಇಲಾಖೆಗಳಲ್ಲಿ ಆದರೂ ಖಾಲಿ ಹುದ್ದೆ ಭರ್ತಿ ಮಾಡಬೇಕು.
| ಸಿ.ಎಸ್. ಷಡಾಕ್ಷರಿ ಅಧ್ಯಕ್ಷ, ಸರ್ಕಾರಿ ನೌಕರರ ಸಂಘ
ಖಾಲಿ ಹುದ್ದೆಗಳು 2.70 ಲಕ್ಷಕ್ಕೂ ಅಧಿಕ!: ಸರ್ಕಾರದಲ್ಲಿ ಮಂಜೂರಾದ ಹುದ್ದೆಗಳ ಪ್ರಮಾಣ 7.71 ಲಕ್ಷ. ಆದರೆ, ಖಾಲಿ ಹುದ್ದೆಗಳ ಪ್ರಮಾಣ 2.70 ಲಕ್ಷ ದಾಟಿದೆ. ಅಂದರೆ ಸರ್ಕಾರದಲ್ಲಿ ಶೇ.35 ಹುದ್ದೆ ಗಳಿಗೆ ನೇಮಕಾತಿ ನಿಂತು ಹೋಗಿದೆ. ನೇಮಕಾತಿ ನಿಯಂತ್ರಣದ ಪರಿಣಾಮ ಕೆಲವು ಇಲಾಖೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿದ್ದರೂ ಅದರ ಪರಿಣಾಮಕಾರಿ ಬಳಕೆ ಆಗುತ್ತಿಲ್ಲ. ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಸಚಿವಾಲಯದಲ್ಲಿ ಅನೇಕ ಹುದ್ದೆ ರದ್ದಾಗುತ್ತವೆ ಎಂಬ ಬಗ್ಗೆ ಸುದ್ದಿಗಳಿವೆ. ಯಾವುದೇ ಕಾರಣಕ್ಕೂ ಹುದ್ದೆಗಳನ್ನು ರದ್ದು ಮಾಡಬಾರದು. ಗುಣಮಟ್ಟದ ಸೇವೆಗಾಗಿ ಖಾಲಿ ಹುದ್ದೆ ಭರ್ತಿ ಮಾಡಬೇಕು. ಮುಂದಿನ ಹೋರಾಟದ ಬಗ್ಗೆ ಶೀಘ್ರದಲ್ಲಿಯೇ ಸಭೆ ನಡೆಸುತ್ತೇವೆ.
| ಪಿ. ಗುರುಸ್ವಾಮಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ
ಶೋಚನೀಯ ಸ್ಥಿತಿ: ಸರ್ಕಾರದಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲವು ಇಲಾಖೆಗಳ ಸ್ಥಿತಿ ಶೋಚನೀಯವಾಗಿದೆ. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡಲು ಗುತ್ತಿಗೆ ನೌಕರರನ್ನು ಆಶ್ರಯಿಸಬೇಕಾಗಿದೆ. 21 ಇಲಾಖೆಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಹುದ್ದೆ ಖಾಲಿ ಇವೆ. 34 ಇಲಾಖೆಗಳಲ್ಲಿ ಶೇ.30 ರಿಂದ 50 ಹುದ್ದೆ ಖಾಲಿ ಇದ್ದರೆ, 8 ಇಲಾಖೆಗಳಲ್ಲಿ ಶೇ. 10-30 ಹುದ್ದೆ ಖಾಲಿ ಇವೆ ಎಂಬ ಮಾಹಿತಿ ಇದೆ.
ಗುತ್ತಿಗೆ ನೌಕರರೇ ಅಧಿಕಾರಿ: ಜಿಲ್ಲೆಯೊಂದರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲ. ಗುತ್ತಿಗೆ ನೌಕರನೇ ನೋಂದಣಿ ಪತ್ರಗಳಿಗೆ ಸಹಿ ಹಾಕಿಕೊಡುವ ವ್ಯವಸ್ಥೆ ಇದೆ ಎನ್ನಲಾಗಿದೆ. ಕೋಟ್ಯಂತರ ರೂ. ಆದಾಯ ತರುವ ಇಲಾಖೆಯ ಸ್ಥಿತಿ ಇದಾಗಿದೆ. ಸಾರಿಗೆ ಇಲಾಖೆಯಲ್ಲಿ ಅನೇಕ ಕಡೆ ಬ್ರೇಕ್ ಇನ್ಸ್ಪೆಕ್ಟರ್ಗಳಿಲ್ಲದೇ ಮಧ್ಯವರ್ತಿಗಳು ಹೇಳಿದಂತೆ ಕೆಲಸ ನಡೆದಿದೆ.