

ನವದೆಹಲಿ: ಆಂಧ್ರಪ್ರದೇಶದಲ್ಲಿ ಎನ್ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಪಾರ್ಟಿ ದೂರ ಸರಿದ ನಂತರ ಬಿಜೆಪಿ ಆ ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಈ ನಡುವೆ, ವೈಎಸ್ಆರ್ ಕಾಂಗ್ರೆಸ್ ಎನ್ಡಿಎ ಮೈತ್ರಿಕೂಟ ಸೇರಬಹುದೆಂಬ ಕ್ಷೀಣ ಧ್ವನಿ ಕೇಳಿಬಂದಿತ್ತು. ಈಗ ಅದಕ್ಕೆ ಪುಷ್ಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ ಭೇಟಿ ಮಾಡಿದ್ದು ರಾಜಕೀಯ ಚಾವಡಿಯ ಕುತೂಹಲ ಕೆರಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆ ವಿಷಯವೇನು ಎಂಬುದು ಬಹಿರಂಗವಾಗಿಲ್ಲ. ಏತನ್ಮಧ್ಯೆ, ಎನ್ಡಿಎ ಸೇರ್ಪಡೆ ಬಗ್ಗೆ ಜಗನ್ ಇನ್ನೂ ಗೊಂದಲದಲ್ಲಿ ಇದ್ದಾರೆಂದು ಎಂದು ಮೂಲಗಳು ತಿಳಿಸಿವೆ.
ಜಗನ್ ಇತ್ತೀಚೆಗೆ ಗೃಹ ಸಚಿವ ಅಮಿತ್ ಷಾರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಎನ್ಡಿಎ ಸೇರ್ಪಡೆ ಬಗ್ಗೆ ಮಾತನಾಡಿದ್ದರು ಎಂದು ವರದಿಯಾಗಿತ್ತು. ಜತೆಗೆ ಪ್ರಧಾನಿ ಮೋದಿ ಕೂಡ ವೈಎಸ್ಆರ್ ಕಾಂಗ್ರೆಸ್ ಎನ್ಡಿಎಗೆ ಸೇರ ಬಯಸಿದ್ದಾರೆ. 2018ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಎನ್ಡಿಎಯಿಂದ ಹೊರ ಹೋದ ಬಳಿಕ ವೈಎಸ್ಆರ್ ಕಾಂಗ್ರೆಸ್ಗೆ ಬಿಜೆಪಿ ಆಹ್ವಾನ ನೀಡಿದೆ ಎಂದು ಹೇಳಿದ್ದು ವರದಿಯಾಗಿತ್ತು.
40 ನಿಮಿಷದ ಭೇಟಿ ವೇಳೆ ಪೊಲಾವರಂ ನೀರಾವರಿ ಯೋಜನೆಗೆ ಬಾಕಿ ಇರುವ ಹಣ, ಕಡಪಾ ಉಕ್ಕು ಘಟಕದ ಯೋಜನೆಯ ಬಾಕಿ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಜಗನ್ ಚರ್ಚಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. (ಏಜೆನ್ಸೀಸ್)