ಜಾತಿ ಗಣತಿ ವರದಿ; ಒಕ್ಕಲಿಗ ಶಾಸಕರ ಸಭೆ: DK ಶಿವಕುಮಾರ್​ ಕೊಟ್ಟ ಸ್ಪಷ್ಟನೆ ಏನು? | Cast Census Report

dk-2025-04-15t175220400-67fe4f8251c2a
Published on

Cast Census Report : ಸರ್ವರಿಗೂ ಸಮಬಾಳು, ಸಮಪಾಲು ಎಂಬ ಬಸವಣ್ಣನವರ ಆಚಾರ ವಿಚಾರ ನಮ್ಮ ಪಕ್ಷದಲ್ಲಿ ಬೆರೆತಿದೆ. ನಾವು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಯಾರಿಗೆ ನ್ಯಾಯ ಒದಗಿಸಿಕೊಡಬೇಕೋ ಅವರಿಗೆ ನ್ಯಾಯ ಒದಗಿಸಿಕೊಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದು ಜಾತಿಗಣತಿಯೋ ಅಥವಾ ದ್ವೇಷ ಗಣತಿಯೋ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಬಗ್ಗೆ ಕೇಳಿದಾಗ, “ಅವರು ಬಹಳ ದೊಡ್ಡವರು. ದೊಡ್ಡ ಮಾತುಗಳನ್ನು ಆಡುತ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ. ನಮ್ಮ ಪಕ್ಷ ತನ್ನದೇ ಆದ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಪಕ್ಷದಲ್ಲಿ ಅನೇಕ ತೀರ್ಮಾನ ಮಾಡಲಾಗಿದ್ದು, ಕಾನೂನಿನಲ್ಲಿ ಯಾರು ಯಾವ ಕೆಲಸ ಮಾಡಬೇಕು ಎಂದು ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅನೇಕ ತೀರ್ಮಾನ ಮಾಡಲಿದೆ” ಎಂದು ತಿರುಗೇಟು ನೀಡಿದರು.

ನಾನು ಪಂಡಿತನೂ ಅಲ್ಲ, ಸರ್ವಜ್ಞನೂ ಅಲ್ಲ

ಒಕ್ಕಲಿಗ ಶಾಸಕರ ಸಭೆ ಬಗ್ಗೆ ಕೇಳಿದಾಗ, “ನಾನು ಈ ಸಮಾಜದ ಪ್ರತಿನಿಧಿಯಾಗಿ, ಸಚಿವ ಸಂಪುಟ ಸಭೆಯಲ್ಲಿ ನಮ್ಮ ವಿಚಾರವನ್ನು ಹೇಗೆ ಮಂಡಿಸಬೇಕು, ಯಾವ ರೀತಿ ಸಲಹೆ ನೀಡಬೇಕು ಎಂದು ಚರ್ಚೆ ಮಾಡಬೇಕಲ್ಲವೇ? ಏಕಾಏಕಿ ನಾನೊಬ್ಬನೇ ಸರ್ವಜ್ಞನಲ್ಲ. ದೊಡ್ಡ ಪಂಡಿತನೂ ಅಲ್ಲ. ನಾನು ಹಳ್ಳಿಯಿಂದ ಬಂದು ಬೆಂಗಳೂರು ಸೇರಿರುವವನು. ಹಿರಿಯರು, ಸ್ನೇಹಿತರು, ಶಾಸಕರ ಅನುಭವ, ತಮ್ಮ ಕ್ಷೇತ್ರಗಳಲ್ಲಿ ಜನ ಏನು ಹೇಳುತ್ತಿದ್ದಾರೆ, ಮಾಧ್ಯಮಗಳು ನೀಡಿರುವ ವರದಿ ಎಲ್ಲವನ್ನು ಚರ್ಚೆ ಮಾಡಿ ಅವಲೋಕಿಸಿ ಚರ್ಚೆ ಮಾಡಬೇಕಿದೆ. ನಾನು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಮಾತನಾಡುವವನಲ್ಲ” ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net