

ಹಲಗೂರು: ಇಲ್ಲಿನ ಗ್ರಾಮ ದೇವತೆಯಾದ ಪಟ್ಟಲದಮ್ಮನ ದೇವಸ್ಥಾನದಲ್ಲಿ ಆಷಾಢ ಮಾಸದ ಮೊದಲನೇ ಶುಕ್ರವಾರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಅರ್ಚಕರಾದ ಕೃಷ್ಣಪ್ಪ ಶುಕ್ರವಾರ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಪಟ್ಟಲದಮ್ಮದೇವರ ಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ, ಹಾಲಿನ ಅಭಿಷೇಕ ನಡೆಸಿ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ನಂತರ ಮಹಾಮಂಗಳಾರತಿ ನೆರವೇರಿತು. ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮ ದೇವತೆಯಾಗಿದ್ದ ಈ ಪಟ್ಟಲದಮ್ಮ ದೇವರ ಸನ್ನಿಧಿಯಲ್ಲಿ ಪ್ರತಿವರ್ಷ ಕೊಂಡೋತ್ಸವವನ್ನು ನಡೆಸಲಾಗುತ್ತದೆ. ಆಶಾಡ ಮಾಸದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಗುತ್ತದೆ. ಆಷಾಢ ಮಾಸದ ಮೊದಲನೇ ಶುಕ್ರವಾರ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ದೇವರ ಭಕ್ತರಾದ ಎಚ್.ಎಂ.ಆನಂದ್‌ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ಭಕ್ತಾದಿಗಳ ಸಹಕಾರದಿಂದ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ. ಭಕ್ತರ ಕಷ್ಟ ಕಾರ್ಪಣ್ಯವನ್ನು ನಿವಾರಿಸುತ್ತಾ ಶಕ್ತಿ ದೇವತೆಯಾಗಿರುವ ಪಟ್ಟಲದಮ್ಮ ದೇವಿ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ ಎಂದರು.
ಹರಕೆ ಹೊತ್ತುಕೊಂಡಿದ್ದ ಭಕ್ತರು ಮೊದಲನೇ ಆಷಾಢ ಶುಕ್ರವಾರದಂದು ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಪರಸ್ಪರ ವಿನಿಮಯ ಮಾಡಿಕೊಂಡು ಹೆಸರುಬೇಳೆ ಪಾನಕ ಹಂಚಿ ದೇವರ ಕೃಪೆಗೆ ಪಾತ್ರರಾದರು.
ಆಷಾಢ ಮಾಸದ ಅಂಗವಾಗಿ ಹಲಗೂರು ಗ್ರಾಮ ದೇವತೆಯಾದ ಪಟ್ಟಲದಮ್ಮ ದೇವಸ್ಥಾನ ಸೇರಿದಂತೆ ಕಾಳಿಕಾಂಬ ದೇವಸ್ಥಾನ, ಗುಂಡಾಪುರದ ಬೆಟ್ಟದರಸಮ್ಮನ ದೇವಸ್ಥಾನ ಹಾಗೂ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನದ ಸನ್ನಿಧಿಗಳಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.