

ಶ್ರವಣ ಎಂದರೆ ಕೇಳು ಎಂದರ್ಥ. ಆದ್ದರಿಂದ ಶ್ರಾವಣದಲ್ಲಿ ಪುರಾಣ, ಪ್ರವಚನ, ಕೀರ್ತನೆಗೆ ವಿಶೇಷ ಮಹತ್ವ ನೀಡಲಾಗಿದೆ. ಶ್ರಾವಣ ಮಾಸವು ವ್ರತಾನುಷ್ಠಾನ, ಪೂಜೆ-ಅರ್ಚನೆ, ಪುರಾಣ-ಪ್ರವಚನಗಳಿಗೆ ಮೀಸಲಾಗಿದೆ. ಶ್ರಾವಣ ಮಾಸಕ್ಕೆ ವೀರಶೈವ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಶಸ್ಱ ನೀಡಲಾಗಿದೆ.
| ಪ್ರಶಾಂತ ರಿಪ್ಪನ್ಪೇಟೆ
ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ 32ನೇ ವರ್ಷದ ಶ್ರಾವಣ ಮಾಸದ ತಪೋನುಷ್ಠಾನ ಕಾರ್ಯಕ್ರಮ ಆ. 17ರಿಂದ ಸೆ. 14ರವರೆಗೆ ರಂಭಾಪುರಿ ಪೀಠದಲ್ಲಿ ನಡೆಯಲಿದೆ. ವರ್ಷಪೂರ್ತಿ ಭಕ್ತರ ಸದಾಶಯದಂತೆ ದೇಶದಾದ್ಯಂತ ಸಂಚರಿಸಿ ಪೂಜೆ-ಪುನಸ್ಕಾರ, ಧರ್ಮ ಪ್ರಚಾರ ಕೈಗೊಳ್ಳುವ ಜಗದ್ಗುರುಗಳು ಶ್ರಾವಣಮಾಸದಲ್ಲಿ ಪೀಠದಲ್ಲಿ ತಪೋನುಷ್ಠಾನ ಕೈಗೊಳ್ಳಲಿದ್ದಾರೆ. ಪ್ರತಿದಿನ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ವೀರಭದ್ರಸ್ವಾಮಿ, ಶಕ್ತಿಮಾತೆ ಚೌಡೇಶ್ವರಿ ಮತ್ತು ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ ನಡೆಯಲಿದೆ. ಸಂಜೆ ಮಾದನಹಿಪ್ಪರಗಿಯ ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದ ‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣ ಪ್ರವಚನ ನಡೆಯಲಿದೆ. ಶ್ರಾವಣ ಶುದ್ಧ ಚೌತಿಯ ಆ. 20ರಂದು ಲಿಂಗೈಕ್ಯ ಶ್ರೀ ಶಿವಾನಂದ ರಾಜೇಂದ್ರ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ಶ್ರಾವಣ ಶುದ್ಧ ಅಷ್ಟಮಿಯ ಆ. 24ರಂದು ಲಿಂಗೈಕ್ಯ ಶ್ರೀ ರುದ್ರಮುನಿ ಜಗದ್ಗುರುಗಳ ಪುಣ್ಯಸ್ಮರಣೋತ್ಸವ ನಡೆಯಲಿದೆ.
ಜ್ಯೋತಿರ್ಲಿಂಗ ಕ್ಷೇತ್ರ ಶ್ರೀಶೈಲಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರಾವಣ ಮಾಸದಲ್ಲಿ ಶ್ರೀ ಮಲ್ಲಿಕಾರ್ಜುನ ಮಹಾಲಿಂಗಕ್ಕೆ ಹಾಗೂ ಭ್ರಮರಾಂಭ ತಾಯಿ ಮತ್ತು ಶ್ರೀ ಜಗದ್ಗುರು ಪಂಡಿತಾರಾಧ್ಯರ ಲಿಂಗೋದ್ಭವ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಶ್ರೀಶೈಲ ಪೀಠದ ಪ್ರಸ್ತುತ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಶ್ರಾವಣ ಮಾಸದ ಪರ್ಯಂತ ಶ್ರೀಶೈಲ ಕ್ಷೇತ್ರದಲ್ಲಿ ಪೂಜಾನುಷ್ಠಾನ ಕೈಗೊಂಡಿದ್ದು, ಆ. 21ರಿಂದ ಆ.14ರವರೆಗೆ ನಿತ್ಯ ಬೆಳಗ್ಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಸಂಜೆ ಜೈನಾಪುರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳಿಂದ ಪುರಾಣ ಪ್ರವಚನ ನಡೆಯಲಿದೆ. ಶ್ರಾವಣ ಮಾಸದ ಅಂಗವಾಗಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಪದ್ಧತಿಯಂತೆ ಎರಡನೇ ಗುರುವಾರದಂದು ಜಂಗಮ ವಟುಗಳಿಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಉಪದೇಶ ನಡೆಯಲಿದೆ.
ಕಾಶೀ ಜಗದ್ಗುರುಗಳು ವಿಶೇಷ ಪೂಜಾನುಷ್ಠಾನ ಕೈಗೊಂಡು ಮಂಗಲಗೊಳಿಸಿ ಇಂದಿನಿಂದ ನಿಜಶ್ರಾವಣ ಅನುಷ್ಠಾನ ಆರಂಭಿಸಿದ್ದಾರೆ. ವೀರಶೈವ ಸಮುದಾಯವು ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಅಧಿಕ ಅನುಷ್ಠಾನವು ವಿಜೃಂಭಣೆ ಯಿಂದ ನಡೆಯಿತು. ಪಂಡರಪುರದಲ್ಲಿ ಅನುಷ್ಠಾನ ಆರಂಭಿಸಿದ ಜಗದ್ಗುರುಗಳು, ಪಾಂಡುರಂಗನಿಗೆ ಇಷ್ಟಲಿಂಗ ಸಹಿತ ಬಂಗಾರದ ಕರಡಗಿಯನ್ನು ಧಾರಣೆ ಮಾಡಿ ದಾಖಲೆ ಬರೆದರು. ಮುಂದೆ ಜಗದ್ಗುರುಗಳ ಧರ್ಮಯಾತ್ರೆಯು ಪುಣೆ, ಮುಂಬೈ, ಬಾಶಿ, ಔರಂಗಾಬಾದ್, ಪರಳಿ, ಲಾತೂರ್, ನಾಗಪುರ, ಮಧ್ಯಪ್ರದೇಶದ ನರ್ಮದಾ ತೀರದಲ್ಲಿರುವ ಜಬಲ್ಪುರ ಮುಖಾಂತರ ಉತ್ತರ ಪ್ರದೇಶದ ತ್ರಿವೇಣಿ ಸಂಗಮ ಪ್ರಯಾಗರಾಜ್ ಮೂಲಕ ಕಾಶಿಯನ್ನು ತಲುಪಿತು. ಅಧಿಕ ಶ್ರಾವಣದ ಮಂಗಲೋತ್ಸವದಲ್ಲಿ 1008 ಮಹಿಳೆಯರು ರುದ್ರಪಠಣ ಮಾಡಿದ್ದು ವಿಶೇಷವಾಗಿತ್ತು. ಶ್ರಾವಣ ಮಾಸದ ಅಂಗವಾಗಿ ಕಾಶಿ ಜಂಗಮವಾಡಿ ಮಠದಲ್ಲಿ ಅನುಷ್ಠಾನ ಕೈಗೊಂಡಿದ್ದು, ನಿತ್ಯ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಆ. 28ರಂದು ಕಾಶಿ ಜಗದ್ಗುರುಗಳ ಜನ್ಮದಿನೋತ್ಸವದ ನಿಮಿತ್ತ ಕರ್ತೃ ಜಗದ್ಗುರು ವಿಶ್ವಾರಾಧ್ಯರಿಗೆ ಮಹಾರುದ್ರಾಭಿಷೇಕ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆ. 17ರಿಂದ ಸೆ.14ರವರೆಗೆ ಅನುಷ್ಠಾನ ಕೈಗೊಂಡಿದ್ದು, ಇಷ್ಟಲಿಂಗ ಮಹಾಪೂಜೆ ನಡೆಸಲಿದ್ದಾರೆ. ನಿತ್ಯ ಕ್ಷೇತ್ರನಾಥ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಸಂಜೆ ಪ್ರವಚನ ನಡೆಯಲಿದೆ. ವಿಶೇಷವಾಗಿ ಉಜ್ಜಯಿನಿ ಸಂಪತ್ತಿನ ಪೀಠವೆಂದು ಹೆಸರಾಗಿದ್ದು, ವರಮಹಾಲಕ್ಷ್ಮಿ ಹಬ್ಬದಂದು ಮುತೆôದೆಯರಿಗೆ ಉಡಿತುಂಬುಕ ಕಾರ್ಯಕ್ರಮ ನಡೆಯಲಿದೆ. ಇನ್ನುಳಿದಂತೆ ಕೇದಾರ ಜಗದ್ಗುರುಗಳು ಸೇರಿದಂತೆ ವಿವಿಧ ಮಠಾಧೀಶರು ಶ್ರಾವಣ ಮಾಸದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮನೆಯಿಂದ ಮನೆಗೆ ಶಿವಾನುಭವ ನಡೆಸಲಿದ್ದಾರೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಅಬ್ಬೆತುಮಕೂರಿನ ಡಾ. ಗಂಗಾಧರ ಶಿವಾಚಾರ್ಯರು, ನಾಲವಾರದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು ಸೇರಿದಂತೆ ನಾಡಿನ ಹಲವು ಮಠಾಧೀಶರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.