ಸರಿಯದ ಎಸ್​ಸಿ-ಎಸ್​ಟಿ ಬ್ಯಾಕ್​ಲಾಗ್ ಗ್ರಹಣ

Vidhana Soudha
Published on

| ಮಂಜುನಾಥ ಕೆ. ಬೆಂಗಳೂರು

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರಿಗೆ ಮೀಸಲಾಗಿರುವ ಬ್ಯಾಕ್​ಲಾಗ್ (ಹಿಂಬಾಕಿ) ಹುದ್ದೆಗಳನ್ನು ಕಳೆದ 21 ವರ್ಷದಿಂದ ಭರ್ತಿ ಮಾಡದಿರುವುದರಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಯುವಕರಿಗೆ ವಯೋಮಿತಿ ಮೀರುವ ಆತಂಕ ಕಾಡಿದೆ.

ವಿವಿಧ ಇಲಾಖೆ, ನಿಗಮ ಮಂಡಳಿ, ಸಹಕಾರ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಈವರೆಗೆ 21,376 ಬ್ಯಾಕ್​ಲಾಗ್ ಹುದ್ದೆಗಳನ್ನು ಗುರುತಿಸಿದೆ. ಇದರಲ್ಲಿ 18,706 ಹುದ್ದೆಗಳು ಭರ್ತಿಯಾಗಿದ್ದು, ಉಳಿದ 165 ಹುದ್ದೆಗಳಿಗೆ ಭರ್ತಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ, 2,505 ಹುದ್ದೆಗಳನ್ನು 2001ರಿಂದ ಈವರೆಗೆ ಭರ್ತಿ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ 2,505ಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ, ಖಾಸಗಿ ಹುದ್ದೆ ತೊರೆದು ಪರೀಕ್ಷೆಗೆ ಸಿದ್ಧತೆ ನಡೆಸಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ವಯೋಮಿತಿ ಮೀರುವ ಆತಂಕ ಶುರುವಾಗಿದೆ. ಇತ್ತ ಖಾಸಗಿ ಉದ್ಯೋಗ ಸಿಗದೆ ಅತ್ತ ಸರ್ಕಾರಿ ಹುದ್ದೆಯೂ ಸಿಗದೆ ಕಂಗಾಲಾಗಿದ್ದೇವೆ ಎಂದು ಉದ್ಯೋಗ ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.

ಅನುದಾನಿತ ಸಂಸ್ಥೆಗಳ ನಿರ್ಲಕ್ಷ್ಯ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಬ್ಯಾಕ್​ಲ್ಯಾಗ್ ಹುದ್ದೆಗಳ ಭರ್ತಿಗೆ ಹತ್ತಾರು ವರ್ಷಗಳಿಂದ ಹಿಂದೇಟು ಹಾಕುತ್ತಿವೆ. ಕೆಲ ಅನುದಾನಿತ ಕಾಲೇಜುಗಳಂತೂ ಹುದ್ದೆಗಳನ್ನು ಲಕ್ಷಾಂತರ ರೂ.ಗೆ ಮಾರಾಟ ಮಾಡಿರುವ ಆರೋಪಗಳಿವೆ. ಇದು ಶಿಕ್ಷಣ ಇಲಾಖೆಗೆ ಗೊತ್ತಿದ್ದರೂ ಅದು ಸುಮ್ಮನಿದೆ.

ಹುಸಿಯಾದ ಸಚಿವರ ಭರವಸೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್​ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸಿ, ಮೂರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಜನಸಂಪನ್ಮೂಲ ಸಚಿವ ಹಾಗೂ ಬ್ಯಾಕ್​ಲಾಗ್ ಹುದ್ದೆ ನೇಮಕಾತಿ ಉಪಸಮಿತಿ ಮುಖ್ಯಸ್ಥ ಗೋವಿಂದ ಕಾರಜೋಳ ಸರ್ಕಾರಕ್ಕೆ ಸೂಚಿಸಿದ್ದರು. ಜತೆಗೆ ಮೂರು ತಿಂಗಳಿನಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಬ್ಯಾಕ್​ಲಾಗ್ ಹುದ್ದೆಗಳು ಖಾಲಿ ಇದ್ದರೂ ಭರ್ತಿಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಸರ್ಕಾರ ಭರ್ತಿ ಮಾಡಿ ನಮ್ಮಂತಹ ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಕರುಣಿಸಬೇಕು. | ಸುರೇಶ್ ಉದ್ಯೋಗ ಆಕಾಂಕ್ಷಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net