ತೂಕ, ಅಳತೆ ಮೋಸ; ಕಠಿಣ ಶಿಕ್ಷೆಯೇ ಇಲ್ಲ!

Measurement Day
Published on
ಇಂದು ಮಾಪನ ದಿನ

| ಬೇಲೂರು ಹರೀಶ ಬೆಂಗಳೂರು

ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರವೇ ಇಲ್ಲದಂತಾಗಿದೆ. ಆರು ವರ್ಷಗಳಲ್ಲಿ 1.17 ಲಕ್ಷ ಪ್ರಕರಣ ದಾಖಲಾದರೂ ಈವರೆಗೆ ಒಬ್ಬರಿಗೂ ಕಠಿಣ ಶಿಕ್ಷೆ ಆಗಿಲ್ಲ. ನಾಮ್ೇವಾಸ್ತೆ ಎಂಬಂತೆ ಪ್ರಕರಣ ದಾಖಲಾಗುತ್ತಿದೆ ಅಷ್ಟೇ. ನ್ಯಾಯಬೆಲೆ ಅಂಗಡಿ ಸೇರಿ ಖಾಸಗಿ ವಲಯದಲ್ಲಿ ಗ್ರಾಹಕರು ಖರೀದಿಸುವ ವಿವಿಧ ರೀತಿಯ ವಸ್ತು ಹಾಗೂ ಆಹಾರ ಪದಾರ್ಥಗಳ ತೂಕ, ಅಳತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೋಸ ನಡೆಯುತ್ತಿದೆ. ಮುಖ್ಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರ ಧಾನ್ಯಗಳು ಸಮರ್ಪಕ ಮತ್ತು ನಿಗದಿತ ಅಳತೆಯಲ್ಲಿ ಗ್ರಾಹಕರಿಗೆ ಕೈ ಸೇರುತ್ತಿಲ್ಲ. ಗ್ರಾಹಕರಿಗೆ ಮೋಸ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಇಲಾಖೆ ಅಧಿಕಾರಿಗಳ ಕರ್ತವ್ಯ. ಆದರೆ, ನೆಪ ಮಾತ್ರಕ್ಕೆ ಪ್ರಕರಣ ದಾಖಲಿಸಿ ಇಂತಿಷ್ಟು ಹಣ ಪಡೆದು ಮುಚ್ಚಿಹಾಕುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ.

ಸಿಬ್ಬಂದಿ ಕೊರತೆ: ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ನಿಯಂತ್ರಕರು, ನಿರೀಕ್ಷಕರು ಮತ್ತಿತರ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿ ಮತ್ತು ಖಾಸಗಿ ಮಳಿಗೆಗಳ ಮೇಲೆ ದಾಳಿ ನಡೆಸಬೇಕಿದ್ದ ಇಲಾಖೆಗೆ ಸಿಬ್ಬಂದಿ ಕೊರತೆಯಿಂದ ಅಸಹಾಯಕ ಸ್ಥಿತಿಯಲ್ಲಿದೆ.

ತೂಕ ಮತ್ತು ಅಳತೆ ವ್ಯತ್ಯಾಸವಾಗಿದ್ದಲ್ಲಿ ಗ್ರಾಹಕರು ಮುಂದೆ ಬಂದು ಧೈರ್ಯವಾಗಿ ದೂರು ನೀಡಿದರೆ ವ್ಯಾಪಾರಸ್ಥರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯ. ಶೇ.90 ಗ್ರಾಹಕರು ದೂರು ನೀಡುವುದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ.

| ವಿ.ಪಾತರಾಜು ನಿಯಂತ್ರಕ ಕಾನೂನು ಮಾಪನಶಾಸ್ತ್ರ ಇಲಾಖೆ

ಪೊಟ್ಟಣ ಸಾಮಗ್ರಿಗಳ ಮೇಲೆ 6 ಅಂಶ ಕಡ್ಡಾಯ
  • ತಯಾರಕರ, ಪ್ಯಾಕರ್, ಆಮದುದಾರರ ಹೆಸರು ಮತ್ತು ವಿಳಾಸ
  • ಸಾಮಗ್ರಿ ಹೆಸರು
  • ನಿವ್ವಳ ತೂಕ, ಅಳತೆ, ಸಂಖ್ಯೆ
  • ತಯಾರಾದ, ಪ್ಯಾಕ್ ಮಾಡಿದ, ಆಮದು ಆಗಿರುವ ದಿನಾಂಕ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಲ್ಲ ತೆರಿಗೆ ಸೇರಿ) ಗ್ರಾಹಕರ ಕುಂದುಕೊರತೆ ವಿಚಾರಣಾ ವ್ಯಕ್ತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ- ಮೇಲ್ ವಿವರ.
ವ್ಯಾಪ್ತಿ ಏನೇನು?

ನ್ಯಾಯಬೆಲೆ ಅಂಗಡಿ, ವ್ಯವಸಾಯ ಸೇವಾ ಸಹಕಾರ ಸಂಘ, ಕಿರಾಣಿ ಅಂಗಡಿ, ಕರ್ನಾಟಕ ಉಗ್ರಾಣ ನಿಗಮ, ಹಣ್ಣು ವ್ಯಾಪಾರಿಗಳು, ಹಾರ್ಡ್​ವೇರ್ ಮತ್ತು ಪೈಂಟ್ಸ್, ಆಟೋಮೊಬೈಲ್ಸ್, ಜನರಲ್ ಮರ್ಚಂಟ್ಸ್, ಮಾಲ್ಸ್, ಬಾರ್ ಆಂಡ್ ರೆಸ್ಟೊರೆಂಟ್, ವೇಬ್ರಿಡ್ಜ್, ಸಗಟು ವ್ಯಾಪಾರಿಗಳು, ಪೆಟ್ರೋಲ್ ಬಂಕ್, ಸ್ಟೆಷನರಿ, ಸಂತೆ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು, ಜ್ಯುವೆಲರ್ಸ್ ಇಲಾಖೆಯ ವ್ಯಾಪ್ತಿಗೆ ಬರಲಿವೆ.

ಉದಾಸೀನ ಬೇಡ

ತೂಕ, ಅಳತೆ ಹಾಗೂ ಪೊಟ್ಟಣ ಸಾಮಗ್ರಿ ವಿಷಯದಲ್ಲಾಗುವ ಲೋಪ ಗಳಲ್ಲಿ ದಂಡ ಕಟ್ಟಿದರಾಯಿತು ಎನ್ನುವ ಹಗುರ ಧೋರಣೆಯನ್ನು ವ್ಯಾಪಾರಿ ಹಾಗೂ ಉತ್ಪನ್ನ ತಯಾರಕರು ಹೊಂದಿದ್ದಾರೆ. ಈ ಉದಾಸೀನ ಧೋರಣೆಯೇ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಒಂದು ಪ್ರಕರಣ ದಾಖ ಲಾದ ನಂತರ 3 ವರ್ಷದ ಒಳಗೆ ಅದೇ ಅಪರಾಧ ಮಾಡಿದರೆ ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

ದೂರು ನೀಡಿ: ತೂಕ ಮತ್ತು ಅಳತೆ ವ್ಯತ್ಯಾಸವಿದ್ದಲ್ಲಿ ಗ್ರಾಹಕರು ಇಲಾಖೆಯ ದೂರವಾಣಿ ಸಂಖ್ಯೆ: 080-22253500 ಅಥವಾ clm-im-ka@nic.in ಗೆ ದೂರು ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net