

ವಿಚಿತ್ರ ನಿರ್ಧಾರ, ವಿಲಕ್ಷಣ ವ್ಯಕ್ತಿತ್ವದಿಂದಲೇ ಸದಾ ಸುದ್ದಿಯಲ್ಲಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯ ಕುರಿತು ಹಲವು ಊಹಾಪೋಹಗಳು ಎದ್ದಿದ್ದವು. ಅಲ್ಲಿನ ಸರ್ಕಾರಿ ಮಾಧ್ಯಮ ಇದೀಗ ಕಿಮ್ ಆರೋಗ್ಯದಿಂದ ಇರುವುದಾಗಿ ಹೇಳಿ, ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಚಿತ್ರವನ್ನು ಬಿಡುಗಡೆ ಮಾಡಿದೆ.
ಕಿಮ್ ಜಾಂಗ್ ಉನ್. ವಿಲಕ್ಷಣ ವ್ಯಕ್ತಿತ್ವದ ಉತ್ತರ ಕೊರಿಯಾದ ಸರ್ವಾಧಿಕಾರಿ. ‘ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ’ ಎಂದು 2016ರಲ್ಲಿ ಹೇಳಿ, ಜಗತ್ತು ಬೆಚ್ಚಿಬಿದ್ದು ಗಮನಿಸುವಂತೆ ಮಾಡಿದ ‘ಯುವನಾಯಕ’! ಕಿಮ್ ಕುರಿತಾದ ಸುದ್ದಿ, ಬೆಳವಣಿಗೆಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ಅಂದಾಜಿಸುವುದೇ ಕಷ್ಟ. ‘ಕಿಮ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ‘ಅನಾರೋಗ್ಯದಿಂದ ಕಿಮ್ ಮೃತಪಟ್ಟಿದ್ದಾರೆ’ ಎಂಬೆಲ್ಲ ವರದಿಗಳು ಕೆಲ ದಿನಗಳ ಹಿಂದಷ್ಟೇ ಹರಿದಾಡಿದ್ದವು. ಬುಧವಾರ ಈ ಎಲ್ಲ ಬೆಳವಣಿಗೆಗಳಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಉನ್ ಆರೋಗ್ಯದಿಂದ ಇದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಹೇಳಿಕೊಂಡಿದೆ.
ಏನಿದು ಹೊಸ ತಿರುವು?: ಕರೊನಾ ಸೋಂಕಿನ ನಿಯಂತ್ರಣ ಮತ್ತು ಚಂಡಮಾರುತ ಕುರಿತು ಎಚ್ಚರಿಕೆ ನೀಡಲು ಕಿಮ್ ಜಾಂಗ್ ಉನ್ ಸಭೆಯಲ್ಲಿ ಪಾಲ್ಗೊಂಡಿರುವ ಚಿತ್ರವನ್ನು ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮ ಕೆಸಿಎನ್ ಪ್ರಕಟಿಸಿದೆ. ‘ಕಿಮ್ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕರೊನಾ ಸೋಂಕು ಹರಡುವುದನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಲು ಮತ್ತು ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಅಧಿಕಾರಿಗಳ ಸಭೆ ನಡೆಸಿದ್ದಾರೆ’ ಎಂದು ಕೆಸಿಎನ್ ವರದಿ ಮಾಡಿದೆ. ಕಿಮ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಡಳಿತದ ಹೆಚ್ಚಿನ ಜವಾಬ್ದಾರಿಗಳನ್ನು ಸಹೋದರಿಗೆ ವಹಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಇತ್ತೀಚೆಗೆ ಹೇಳಿತ್ತು. ಕಿಮ್ ಕೋಮಾದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಕೊರಿಯಾ ಹೆರಾಲ್ಡ್’ ವರದಿ ಮಾಡಿತ್ತು. ಕಿಮ್ ಜಾಂಗ್ಗೆ ಆರೋಗ್ಯದ ಬಗ್ಗೆ ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ವಲಯಕ್ಕೆ ಅನುಮಾನ ಕಾಡುತ್ತಿದೆ.
ಬಿಡುಗಡೆಗೊಂಡ ಫೋಟೋ: ಕಿಮ್ ಬಿಳಿ ಸೂಟ್ ಧರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ‘ರೊಡಾಂಗ್ ಸಿನ್ಮುನ್’ ಪತ್ರಿಕೆ ಸಹ ಪ್ರಕಟಿಸಿದೆ.
‘ಮರಣದ ವರದಿ’: ಕಿಮ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಈ ವರ್ಷದ ಏಪ್ರಿಲ್-ಮೇನಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆ ಬಳಿಕ ದಿಢೀರನೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಅಚ್ಚರಿ ಮೂಡಿಸಿದ್ದರು. ಕೆಲ ದಿನಗಳ ಹಿಂದೆ ಮತ್ತೆ ಅನಾರೋಗ್ಯದ ಸುದ್ದಿಗಳು ಹರಿದಾಡಿ, ಅವರು ಕೋಮಾಗೆ ಜಾರಿದ್ದಾರೆ ಎಂದು ಹೇಳಲಾಯಿತು. ಅವರ ಶವಯಾತ್ರೆ ಎಂದು ಹೇಳಲಾದ ವಿಡಿಯೋ ಕೂಡ ವೈರಲ್ ಆಗಿತ್ತು. ಈ ನಡುವೆ, ‘ಉತ್ತರ ಕೊರಿಯಾದಲ್ಲಿ ಕರೊನಾ ಹಾವಳಿ ತುಂಬ ಇದೆ. ಪರಿಸ್ಥಿತಿ ಕೈಮೀರಿದೆ. ಸೋಂಕಿನಿಂದ ಪಾರಾಗಲು ಕಿಮ್ ಅಡಗಿಕೊಂಡಿದ್ದಾರೆ, ಅವರು ಸತ್ತಿಲ್ಲ’ ಎಂದು ದಕ್ಷಿಣ ಕೊರಿಯಾದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರು ಹೇಳಿ ಚರ್ಚೆಗೆ ಗ್ರಾಸವಾಗಿದ್ದರು.
2011ನೇ ಇಸವಿ. ಉತ್ತರ ಕೊರಿಯಾದಲ್ಲಿ ‘ಡಿಯರ್ ಲೀಡರ್’ ಎಂದೇ ಜನಪ್ರಿಯರಾಗಿದ್ದ ಕಿಮ್ ಜಾಂಗ್ ಇಲ್ ಡಿಸೆಂಬರ್ 17ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಇಡೀ ದೇಶ ಶೋಕಸಾಗರದಲ್ಲಿ ಮುಳುಗಿತ್ತು. ಮುಂದಿನ ಹದಿನೈದು ದಿನಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಕಿಮ್ ಜಾಂಗ್ ಉನ್ ಕೈಗೆ ಆಡಳಿತ ಚುಕ್ಕಾಣಿ ಬಂತು. ಅಂದು ಅವರ ವಯಸ್ಸು ಮೂವತ್ತರ ಆಸುಪಾಸು. ಈ ಮೂಲಕ, ಕಿಮ್ ಸಾಮ್ರಾಜ್ಯದ ಮೂರನೇ ತಲೆಮಾರಿನ ಆಡಳಿತದ ಆರಂಭವಾಗಿತ್ತು. ಎರಡನೇ ವಿಶ್ವಯುದ್ಧದ ಬಳಿಕ ಎರಡನೇ ಕಿಮ್ ಸಂಗ್ ಉತ್ತರ ಕೊರಿಯಾದ ಅಧ್ಯಕ್ಷರಾಗಿ 1948ರಲ್ಲಿ ಅಧಿಕಾರ ವಹಿಸಿಕೊಂಡರು. ಉತ್ತರ ಕೊರಿಯಾದಲ್ಲಿ ಕಿಮ್ ವಂಶಾಡಳಿತಕ್ಕೆ ಇದು ನಾಂದಿಯಾಯಿತು. ಅತ್ತ ದಕ್ಷಿಣ ಕೊರಿಯಾದಲ್ಲಿ ಸ್ಯಾಂಗ್ವಾನ್ ರ್ಹೀ ಮೊದಲ ಅಧ್ಯಕ್ಷರಾದರು. ಇದನ್ನೂ ಓದಿ: ‘ಒಂದಲ್ಲ…8 ಹಾರ್ಡ್ ಡ್ರೈವ್ಗಳು…!’; ಇನ್ನೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಸ್ನೇಹಿತ
2010ರ ಕೊನೆಯ ಭಾಗದಲ್ಲೇ ‘ಭವಿಷ್ಯದ ನಾಯಕ’ ಎಂದು ಉನ್ ಗುರುತಿಸಲ್ಪಟ್ಟಿದ್ದರು. ಕಿಮ್ ಜಾಂಗ್ ಇಲ್ ಅಂತ್ಯಕ್ರಿಯೆ 2011ರ ಡಿಸೆಂಬರ್ 28ರಂದು ನಡೆದ ಬೆನ್ನಲ್ಲೇ, ಕಿಮ್ ಜಾಂಗ್ ಉನ್ ‘ಸುಪ್ರೀಂ ಲೀಡರ್’ ಎಂದು ಅಧಿಕೃತವಾಗಿ ಘೊಷಿಸಲಾಯಿತು. ಉತ್ತರ ಕೊರಿಯಾದ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ ಅಧ್ಯಕ್ಷರಾಗಿದ್ದ ಕಿಮ್ ಯಾಂಗ್ ನಾಮ್ (ಉನ್ ಸಹೋದರ),‘ಕಾಮ್ರೇಡ್ ಕಿಮ್ ಜಾಂಗ್ ಉನ್ ಇನ್ನು ಮುಂದೆ ನಿಕಟಪೂರ್ವ ಅಧ್ಯಕ್ಷರಾಗಿದ್ದ ಇಲ್ ಅವರ ಸಿದ್ಧಾಂತಕ್ಕೆ ಬದ್ಧರಾಗಿ ಈ ದೇಶದ ನಾಯಕತ್ವವನ್ನು ಮುಂದುವರಿಸಲಿದ್ದಾರೆ’ ಎಂದು ಘೊಷಿಸಿದ್ದರು. ಡಿಸೆಂಬರ್ 30ರಂದು ಪಕ್ಷದ ಪಾಲಿಟ್ಬ್ಯೂರೋ ಉನ್ ಅವರನ್ನು ಕೊರಿಯನ್ ಪೀಪಲ್ಸ್ ಆರ್ವಿುಯ ಸುಪ್ರೀಂ ಕಮಾಂಡರ್ ಎಂದು ನೇಮಿಸಿತು. 2012ರ ಮಾರ್ಚ್ ಅಂತ್ಯದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಹೊಸದಾಗಿ ರಚಿಸಲಾದ ‘ಫಸ್ಟ್ ಸೆಕ್ರಟರಿ’ ಹುದ್ದೆಗೂ ಉನ್ರನ್ನು ಆಯ್ಕೆ ಮಾಡಲಾಯಿತು. ಮುಂದೆ ಏ.13ರಂದು ದೇಶದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಅವರಿಗೆ, ಜುಲೈ 18ರಂದು ಆರ್ವಿುಯ ಮಾರ್ಷಲ್ ದರ್ಜೆಗೆ ಬಡ್ತಿ ಸಿಕ್ಕಿತು. ಇದು ಸಶಸ್ತ್ರ ದಳಗಳ ಉನ್ನತ ಹುದ್ದೆಯಾಗಿದ್ದು, ಸೇನಾ ವಿಭಾಗವನ್ನೆಲ್ಲ ನಿಯಂತ್ರಿಸುವ ಅಧಿಕಾರವೂ ಉನ್ ಪಾಲಾಯಿತು. ಮುಂದಿನ ಒಂದೇ ವರ್ಷದ ಅವಧಿಯಲ್ಲಿ ಪ್ರಭಾವಿಯಾಗಿ ಬೆಳೆದ ಉನ್, ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದ ‘2013ರ ಜಗತ್ತಿನ ಪ್ರಭಾವಿ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು.
ಕಿಮ್ ಜಾಂಗ್ ಉನ್ ಹುಟ್ಟಿದ್ದು 1982ರ ಜನವರಿ 8 ಎನ್ನುತ್ತವೆ ಉತ್ತರ ಕೊರಿಯಾದ ಅಧಿಕೃತ ದಾಖಲೆಗಳು. ಆದರೆ, ಸಮೀಪವರ್ತಿಗಳ ಪ್ರಕಾರ 1983ರ ಜನವರಿ 8 ಸರಿಯಾದ ಜನ್ಮದಿನ. ಇವರ ತಾಯಿ ಕೊ ಯಾಂಗ್ ಹುಯೀ ಅವರು ಇಲ್ಗೆ ಮೂರನೇ ಪತ್ನಿ. ಈ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದು ಇಬ್ಬರು ಪುತ್ರರು, ಒಬ್ಬ ಪುತ್ರಿ. ಮೊದಲ ಪತ್ನಿಯಲ್ಲಿ ಒಬ್ಬ ಪುತ್ರ, ಒಬ್ಬಳು ಪುತ್ರಿ. ಒಟ್ಟು ಐದು ಮಕ್ಕಳು.
ಉನ್ ಅಧಿಕಾರಕ್ಕೆ ಬಂದ ನಂತರ ದೇಶದ ಪುರುಷರು ಹಾಗೂ ಮಹಿಳೆಯರು ಅನುಸರಿಸಬೇಕಾದ ಕೇಶವಿನ್ಯಾಸದ ಬಗ್ಗೆಯೂ ಕಾನೂನು ಮಾಡಿದರು. ಪುರುಷರು ತನ್ನ ಕೇಶವಿನ್ಯಾಸವನ್ನೂ, ಮಹಿಳೆಯರು ತನ್ನ ಪತ್ನಿ ರಿ ಸೋಲ್ ಜು ಕೇಶವಿನ್ಯಾಸವನ್ನೂ ಅನುಸರಿಸಬೇಕು ಎಂದು ಆದೇಶಿಸಿದರು.
ಸಚಿವ ಸಂಪುಟದಲ್ಲಿ ಪ್ರಮುಖ ನೀತಿ ನಿರೂಪಕನಾಗಿದ್ದ ಮಾವ ಚಾಂಗ್ ಸಾಂಘ್ ಥೇಕ್ ಅವರನ್ನು 2013ರ ಡಿಸೆಂಬರ್ನಲ್ಲಿ ಮರಣದಂಡನೆ ಶಿಕ್ಷೆಗೊಳಪಡಿಸಿದರು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಅನ್ ಸಹೋದರಿ ಆಡಳಿತ ಹೇಗಿರುತ್ತೆ? ತಜ್ಞರ ವಿಶ್ಲೇಷಣೆ ಹೀಗಿದೆ…!
ಕಿಮ್ ಜಾಂಗ್ ಉನ್ ಸೋದರಿ ಕಿಮ್ ಯೋ ಜಾಂಗ್ (32) ಉತ್ತರ ಕೊರಿಯಾದಲ್ಲಿ ಅತ್ಯಂತ ಪ್ರಭಾವಶಾಲಿ, ‘ಉಕ್ಕಿನ ಮಹಿಳೆ’ ಎಂದೇ ಖ್ಯಾತರು. ಕಿಮ್ ಉತ್ತರಾಧಿಕಾರಿ ಎನ್ನಲಾಗಿದ್ದು, ದೇಶದ ಚುಕ್ಕಾಣಿ ಹಿಡಿದಲ್ಲಿ ಕಮ್ಯೂನಿಸ್ಟ್ ದೇಶ ಉತ್ತರ ಕೊರಿಯಾದ ಪ್ರಪ್ರಥಮ ಮಹಿಳಾ ಮುಖ್ಯಸ್ಥರು ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಉತ್ತರ ಕೊರಿಯಾದ ಮಾಜಿ ಅಧ್ಯಕ್ಷ ಕಿಮ್ ಜಾಂಗ್ ಇಲ್ರ ಐವರು ಮಕ್ಕಳಲ್ಲಿ ಕಿಮ್ ಜಾಂಗ್ ಉನ್, ಯೋ ಜಾಂಗ್ ರಾಜಕೀಯವಾಗಿ ಎತ್ತರಕ್ಕೆ ಬೆಳೆದರು. ಕಿಮ್ಸ್ ಸಹಾಯಕಿಯಾಗಿಯೂ ಇದ್ದ ಯೋ ಜಾಂಗ್, ಇತ್ತೀಚಿನ ದಿನಗಳಲ್ಲಿ ದೇಶದ ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದಾರೆ.
ಕ್ರೂರ ಆಡಳಿತಕ್ಕೆ ಕುಖ್ಯಾತರಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ಗಿಂತಲೂ ಯೋ ಜಾಂಗ್ ಕಠಿಣ ಹೃದಯಿ ಎಂದು ಹೇಳಲಾಗುತ್ತದೆ. ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಇವರು ಸಿದ್ಧಹಸ್ತರು. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಜಂಟಿ ಸಂಪರ್ಕ ಕಚೇರಿಯನ್ನು ಕಳೆದ ಮೇ ತಿಂಗಳಲ್ಲಿ ಧ್ವಂಸ ಮಾಡಿದ್ದು ಇದಕ್ಕೆ ಉದಾಹರಣೆ. 2018ರ ಮಾರ್ಚ್ನಲ್ಲಿ ಮೊದಲ ಬಾರಿಗೆ ಬಹಿರಂಗವಾಗಿ ದಕ್ಷಿಣ ಕೊರಿಯಾದ ಅಧಿಕಾರಿಗಳನ್ನು ಟೀಕಿಸುವುದರೊಂದಿಗೆ ರಾಜಕೀಯ ರಂಗದಲ್ಲಿ ಕಾಣಿಸಿಕೊಂಡ ಯೋ ಜಾಂಗ್, ನಂತರ ಟ್ರಂಪ್ರ ಕೆಲವು ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕವೂ ದೇಶದ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಿರುವ ಸುಳಿವು ನೀಡಿದ್ದರು.