ಮಹಾ ದಾವೆ ವಜಾ ವಾದವೇ ಠಾಕ್ರೆ ಉದ್ಧಟತನಕ್ಕೆ ಮದ್ದು; ರಾಜ್ಯ ಸರ್ಕಾರಕ್ಕೆ ಕಾನೂನು ತಜ್ಞರ ಸಲಹೆ

Gadi
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಗಡಿ ತಂಟೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಮಹಾರಾಷ್ಟ್ರ ಹೂಡಿರುವ ದಾವೆಯನ್ನು ವಜಾಗೊಳಿಸಬೇಕೆಂದು ಪ್ರಬಲ ವಾದ ಮಂಡಿಸಬೇಕು. ಆ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ.

ಗಡಿ ಭಾಗದಲ್ಲಿ ಶಾಂತಿ, ಸೌಹಾರ್ದತೆ, ಭಾಷೆ ಹಾಗೂ ಸಾಮಾಜಿಕ ಸಾಮರಸ್ಯದ ಬದುಕಿಗೆ ಭಂಗ ಉಂಟಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಪಕ್ಕಕ್ಕಿಟ್ಟು ನಿಷ್ಠೂರ ನಿಲುವು ತಳೆಯುವುದು ಅಗತ್ಯವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿ ದಶಕಗಳೇ ಕಳೆದಿವೆ. ತಮಗೆ ಸೇರಿದ್ದು, ಸೇರಬೇಕು ಎಂಬ ವಾದದಲ್ಲಿ ಹುರುಳಿಲ್ಲ ಎನ್ನುವುದು ಮಹಾರಾಷ್ಟ್ರಕ್ಕೂ ಅರಿವಿದೆ. ಆದರೆ ಆಂತರಿಕ ತುಮುಲ, ಜನಾಕ್ರೋಶವನ್ನು ಬೇರೆಡೆ ತಿರುಗಿಸಲು ಅಲ್ಲಿನ ಸರ್ಕಾರ ಇಲ್ಲದ ‘ವಿವಾದ’ದ ಅಸ್ತ್ರ ಬಳಸಿಕೊಳ್ಳುತ್ತಿದೆ ಎಂಬುದೂ ಜಗಜ್ಜಾಹೀರಾಗಿದೆ.

ರಾಜಕೀಯ ಕೈಗೊಂಬೆ: ಉಭಯ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರವಿದ್ದಾಗ ಧ್ವನಿ ಕ್ಷೀಣಿಸುತ್ತಿದೆ. ಪಕ್ಷಗಳು ಬೇರೆಯಾದ ತಕ್ಷಣ ಅಪಸ್ವರಕ್ಕೆ ಬಲ ಸಿಗುತ್ತದೆ. ಇದೀಗ ಉದ್ಧವ್ ಠಾಕ್ರೆ ಅದೇ ತಂತ್ರಕ್ಕೆ ಮೊರೆ ಹೋಗಿದ್ದು, ಶರದ್ ಪವಾರ್ ನೇತೃತ್ವದ ಎನ್​ಸಿಪಿ ಕೂಡ ಧ್ವನಿಗೂಡಿಸಿದೆ. ಮಹಾರಾಷ್ಟ್ರ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕರ್ನಾಟಕ ಬೆಲೆ ತೆತ್ತಬೇಕಾದ ಅಗತ್ಯವೇನಿದೆ ? ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೆಹೆರ್ ಚಂದ್ ಮಹಾಜನ್ ನೇತೃತ್ವದ ಸಮಿತಿ ವರದಿಯನ್ನು ಮಹಾರಾಷ್ಟ್ರ ಎಂದೋ ತಿರಸ್ಕರಿಸಿಯಾಗಿದೆ. ಹೀಗಾಗಿ ಅದೇ ವರದಿಗೆ ಕರ್ನಾಟಕ ಜೋತು ಬಿದ್ದು ತನ್ನ ನಿಲುವು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.

ಸತ್ವಹೀನ ತಕರಾರು: ರಾಜ್ಯಗಳ ಪುನರ್ವಿಂಗಡಣೆ 1956 ಕಾಯ್ದೆ, ಸಂವಿಧಾನದ ಒಂದನೇ ಷೆಡ್ಯೂಲ್ ಪ್ರಕಾರ ಆಯಾ ರಾಜ್ಯಗಳ ವ್ಯಾಪ್ತಿ, ಗಡಿ ಗುರುತಿಸಲಾಗಿದೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದೂ ಎಂದು ದಾಖಲಾದ ಬಳಿಕ ಗಡಿ ತಕರಾರು ತೆಗೆದಿರುವುದು ಸತ್ವಹೀನ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಮಹಾರಾಷ್ಟ್ರ ಹೂಡಿದ ದಾವೆ ವಜಾಗೊಳಿಸುವುದಕ್ಕೆ ಯೋಗ್ಯವಾಗಿದ್ದು, ರಾಜ್ಯ ಸರ್ಕಾರ ಪ್ರಬಲ ವಾದ ಮಂಡಿಸಬೇಕಷ್ಟೇ. ಅಲ್ಲದೆ, ಉದ್ಧವ್ ಠಾಕ್ರೆ ಹೇಳಿಕೆ ಮುಂದಿಟ್ಟುಕೊಂಡು ನ್ಯಾಯಾಂಗ ನಿಂದನೆ ದಾವೆ ಹೂಡಿದರೆ, ‘ವಿವಾದಿತ ಪ್ರದೇಶ’ವೆಂದು ನಾವೇ ಒಪ್ಪಿಕೊಂಡಂತಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಭಿವೃದ್ಧಿಗೆ ಸೀಮಿತ: ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಭಾಷೆ.ಹಾಗೆಯೇ ಅನ್ಯಭಾಷಿಕರನ್ನು ಗೌರವದಿಂದ ಕಾಣಬೇಕು ಎಂಬುದರ ಅರ್ಥ ರಾಜ್ಯದಲ್ಲೇ ಮತ್ತೊಂದು ಸಣ್ಣ ರಾಜ್ಯ ಸೃಷ್ಟಿಸಬೇಕು ಎಂದಲ್ಲ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ, ಜವಾಬ್ದಾರಿಯಾಗಿದೆ. ರಾಜಿ ಸಂಧಾನದ ಮೂಲಕ ರಾಜ್ಯ ಗಡಿಗಳನ್ನು ಗುರುತಿಸಲಾಗಿದೆ. ಜತೆಗೆ ರಾಜ್ಯಗಳ ಮರು ವಿಂಗಡಣೆ ಕಾಯ್ದೆ ಪ್ರಕಾರವೇ ಇತ್ಯರ್ಥವಾಗಿದೆ. ಮಹಾಜನ್ ಶಿಫಾರಸುಗಳನ್ನು ಹಿಂದುಳಿದ ಪ್ರದೇಶದ ಅಭಿವೃದ್ಧಿ ನೆಲೆಯಲ್ಲಿ ಪರಿಗಣಿಸುವುದು ನ್ಯಾಯೋ ಚಿತವೆಂದು ತಜ್ಞರು ಮತ್ತೊಂದು ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್​ನಲ್ಲಿ ಮಹಾರಾಷ್ಟ್ರ ಹೂಡಿರುವ ದಾವೆಯೇ ಹುರುಳಿಲ್ಲದ್ದು. ಸಂವಿಧಾನ, ಕಾಯ್ದೆ ರೀತ್ಯ ರಾಜ್ಯಗಳ ಮರುವಿಂಗಡಣೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಮಹಾರಾಷ್ಟ್ರ ಅರ್ಜಿ ವಜಾಗೊಳಿಸುವಂತೆ ಕರ್ನಾಟಕ ಸರ್ಕಾರ ಪ್ರಬಲ ವಾದ ಮಂಡಿಸಬೇಕು. ಗಟ್ಟಿ ನೆಲೆಯಿಲ್ಲದ ಸಮಸ್ಯೆ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. | ಕೆ.ವಿ.ಧನಂಜಯ ಕಾನೂನು ತಜ್ಞ

ಮಹದಾಯಿ ನೀರು ನಮಗೆ ಸಿಗಲೇಬೇಕು

ಬೆಂಗಳೂರು: ಕಳಸಾ-ಬಂಡೂರಿ ನಾಲೆಗಳ ಮೂಲಕ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ದಾಹ ನೀಗಿಸುವುದಕ್ಕೆ ಮಹದಾಯಿ ನದಿ ನೀರು ನಮಗೆ ಸಿಗಲೇಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೃಢ ನಿಲುವು ವ್ಯಕ್ತಪಡಿಸಿದರು. ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತೆ ಎತ್ತಿರುವ ತಗಾದೆ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶ ರಾಜ್ಯಕ್ಕೆ ಅನುಕೂಲಕರವಾಗಿದೆ. ಮಹಾದಾಯಿ ನೀರು ಬಳಕೆಗೆ ಯಾವುದೇ ಸಮಸ್ಯೆಯಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿರುವುದೇ ನಿದರ್ಶನ. ಈ ವಿಷಯವಾಗಿ ಕೇಂದ್ರ ಸರ್ಕಾರ, ನಾಯಕರಿಗೂ ಮನವರಿಕೆ ಮಾಡಿಕೊಡುವೆ ಎಂದರು. ಆರೋಪ, ದಾವೆಗಳು ರಾಜ್ಯದ ನ್ಯಾಯಸಮ್ಮತ ನಿಲುವಿಗೆ ಅಡ್ಡಿಯಾಗದು. ಸ್ವಾರ್ಥಕ್ಕಾಗಿ ಗೋವಾ ಸಿಎಂ ನೀಡಿರುವ ಹೇಳಿಕೆಯ ಉದ್ದೇಶ ಫಲಿಸುವುದಿಲ್ಲ ಎಂದು ಸಿಎಂ ಬಿಎಸ್​ವೈ ಟೀಕಿಸಿದರು. ಕಳಸಾ-ಬಂಡೂರಿ ನಾಲೆಗಳ ಮೂಲಕ ಮಹಾದಾಯಿ ನದಿ ನೀರನ್ನು ಅಕ್ರಮವಾಗಿ ಮಲಪ್ರಭೆಗೆ ತಿರುಗಿಸಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್​ನಲ್ಲಿ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net