

ಬೆಂಗಳೂರು: ಉತ್ತರ ಕರ್ನಾಟಕದ ವಿಚಾರಗಳನ್ನು ಮುಂದಿಟ್ಟುಕೊಂಡು ಚರ್ಚೆಗೆ ವಿಧಾನ ಮಂಡಲದ ವಿಶೇಷ ಅಧಿವೇಶಣ ಕರೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ನೀತಿ, ಕಾರ್ಯಕ್ರಮ ರೂಪಿಸಿದರೆ ಸಾಲದು. ಪರಿಣಾಮಕಾರಿ ಅನುಷ್ಠಾನಕ್ಕೆ ಏನೆಲ್ಲ ಮಾಡಬೇಕು ಎಂದು ವಿಸ್ತೃತವಾಗಿ ಚರ್ಚಿಸಿದರೆ, ಪರಿಹಾರ ಲಭಿಸಲು ಸಾಧ್ಯವಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರೂ. ಕೊಟ್ಟಿರುವುದಾಗಿ ಸರ್ಕಾರ ಹೇಳುತ್ತದೆ. ಆದರೆ ಕ್ರಿಯಾ ಯೋಜನೆ, ಅನುಮೋದನೆ ಎಲ್ಲವೂ ನಿಧಾನವಾಗುವ ಕಾರಣ ಅಂತಿಮವಾಗಿ ಮೂರು ಸಾವಿರ ಕೋಟಿ ರೂ. ಕೊಟ್ಟರೆ ಹೆಚ್ಚು ಎಂಬುದು ಜನರ ಭಾವನೆಯಾಗಿದೆ.
ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಹಿಂದುಳಿದ ತಾಲೂಕುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ, ಆದ್ಯತೆಗೆ ಅನುಸಾರ ಅಭಿವೃದ್ಧಿಪಡಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದು, ಪ್ರತಿಪಕ್ಷಗಳು ಧ್ವನಿಯಾಗಲು ಬಯಸಿವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನೀರಾವರಿ ಯೋಜನೆಗಳು, ತೊಗರಿ, ಹತ್ತಿ, ಮೆಣಸಿನಕಾಯಿ ಮತ್ತಿತರ ಬೆಳೆಗಾರರ ಸಮಸ್ಯೆಗಳು, ಬೃಹತ್ ಉದ್ಯಮಗಳು, ಕೃಷಿ ಆಧಾರಿತ ಉದ್ಯಮಗಳತ್ತ ಸರ್ಕಾರ ಗಮನಹರಿಸಬೇಕಾಗಿದೆ.
ಬೆಂಗಳೂರು, ಮೈಸೂರು ಕೇಂದ್ರಿತ ಅಭಿವೃದ್ಧಿಯಾಗುತ್ತಿದೆ. ಸಮತೋಲನ ಕಾಪಾಡಿಕೊಳ್ಳುತ್ತಿಲ್ಲ ಎಂದು ಉತ್ತರ ಕರ್ನಾಟಕದ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ದೂರಿದರು.
ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಸರಿಯಾಗಿ ಚರ್ಚೆಯಾಗಲಿಲ್ಲ. ಎತ್ತಿದ ವಿಷಯಗಳಿಗೆ ಸಚಿವರಿಂದ ಸಮರ್ಪಕ ಉತ್ತರ ಬರಲಿಲ್ಲ. ವಿಧಾನ ಪರಿಷತ್‌ಗೆ ಸಿಎಂ ಸಿದ್ದರಾಮಯ್ಯ ಒಂದು ದಿನ ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ಛಲವಾದಿ ಬೇಸರ ವ್ಯಕ್ತಪಡಿಸಿದರು.