ವಿಧಾನಸಭೆ ಉಪ ಚುನಾವಣೆಗಾಗಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

vote
Published on

ನವದೆಹಲಿ: ಉಪ ಚುನಾವಣೆಗಾಗಿ ಮತದಾರರ ಪರಿಷ್ಕರಣೆಗೆ ಮುಂದಾದ್ದರಿಂದ ಭಾರತೀಯ ಚುನಾವಣಾ ಆಯೋಗದಲ್ಲಿ 20 ವರ್ಷಗಳ ಬಳಿಕದ ವಿದ್ಯಮಾನ ಮರುಕಳಿಸಿದೆ. ತಮಿಳುನಾಡು ಉಪ ಚುನಾವಣೆಗೆ 2006ರಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆ ನಡೆಸಲಾಗಿದ್ದು, ಆ ಬಳಿಕ ಬೈಪೋಲ್​ಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವುದು ಇದೇ ಮೊದಲು.

ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ಆಯೋಗ ನಿರ್ಧರಿಸುತ್ತದೆ. ಚುನಾವಣಾ ಆಯೋಗ ನಿರ್ದೇಶಿಸದ ಹೊರತು ಪ್ರತಿ ಚುನಾವಣೆ ಮತ್ತು ಉಪ ಚುನಾವಣೆಗೆ ಮೊದಲು ಮತದಾರರ ಪಟ್ಟಿ ಪರಿಷ್ಕರಿಸಬೇಕೆಂದು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲೇಖಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಿಸದಿದ್ದರೆ, ಸಂಬಂಧಿತ ಮತದಾರರ ಪಟ್ಟಿಯ ಸಿಂಧುತ್ವ ಅಥವಾ ಮುಂದುವರಿದ ಕಾರ್ಯåಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಅವರು ಕಾನೂನನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ವಿಶೇಷ ಪರಿಷ್ಕರಣೆ ಪೂರ್ಣಗೊಳ್ಳುವವರೆಗೆ ಪ್ರಸ್ತುತ ಮತದಾರರ ಪಟ್ಟಿಯ ಸಿಂಧುತ್ವ ಮುಂದುವರಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್​ನ ಎರಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್​ನಲ್ಲಿ ತಲಾ ಒಂದು ವಿಧಾನಸಭಾ ಸ್ಥಾನಗಳಿಗೆ ಜೂ.19ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ನಡೆಯುತ್ತಿದೆ.

ಏನಿದು ಪರಿಷ್ಕರಣೆ?: ಕ್ಷೇತ್ರವನ್ನು ತೊರೆದ ಅಥವಾ ಮರಣ ಹೊಂದಿದ ಮತದಾರರನ್ನು ಹೊರಗಿಡಲು ಮತ್ತು ಹೊಸ ಹೆಸರುಗಳನ್ನು ಸೇರಿಸಲು ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಸಾರಾಂಶ ಪರಿಷ್ಕರಣೆ ಎಂದು ಕರೆಯಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net