

ಮುಖ್ಯವಾಗಿ ನ್ಯಾಯಾಧೀಶರ ನೇಮಕಾತಿಯಲ್ಲಿ ಸಮಾಜದ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು. ಜಡ್ಜ್ಗಳ ನೇಮಕದಲ್ಲಿ ಹೆಚ್ಚು ಪಾರದರ್ಶಕತೆಗೆ ಒತ್ತು ಸಿಗಬೇಕು. ಯಾವುದೇ ಮುಲಾಜಿಗೆ ಒಳಗಾಗದೆ ಸಂಪೂರ್ಣ ಮೆರಿಟ್ ಆಧಾರದ ಮೇಲೆಯೇ ನೇಮಕಾತಿ ಪ್ರಕ್ರಿಯೆ ನಡೆಯುವಂತಾಗಬೇಕು. ಈ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿ ಇರದಂತೆ ನೋಡಿಕೊಳ್ಳಬೇಕು. ಇಂತಹ ಉಪಕ್ರಮಗಳನ್ನು ಕೈಗೊಂಡು ಮುಂದಡಿ ಇಟ್ಟಲ್ಲಿ ಜನರಿಗೆ ನ್ಯಾಯಾಲಯಗಳ ಮೇಲೆ ಹೆಚ್ಚಿನ ನಂಬಿಕೆ ಬರುವಂತಾಗುತ್ತದೆ. ಜತೆಗೆ ದೇಶದ ಸ್ವಾತಂತ್ರೊ್ಯೕತ್ಸವದ 100ನೇ ವರ್ಷದ ಹೊಸ್ತಿಲಲ್ಲಿ ಹೊಸ ಭರವಸೆಯೂ ಮೂಡುತ್ತದೆ. ಜನರಲ್ಲಿರುವ ನಂಬಿಕೆ, ಭರವಸೆಯನ್ನು ಹುಸಿಗೊಳಿಸದಂತೆ ನ್ಯಾಯಾಂಗವೂ ಕಾರ್ಯನಿರ್ವಹಿಸುವಂತಾಗಬೇಕು. ತ್ವರಿತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡುವುದು ಹಾಗೂ ಕಕ್ಷಿದಾರರಿಗೆ ನ್ಯಾಯದಾನ ಸಿಗುವಂತಾದಲ್ಲಿ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಂಗ ಕ್ಷೇತ್ರ ಮುಂದುವರಿಯಬೇಕಿದೆ.
ನ್ಯಾಯಾಲಯ ದೇಗುಲ ಇದ್ದಂತಿದೆ. ಬಹುಶಃ ಕೋರ್ಟ್ಗಳು ಮಾತ್ರ ಜಾತಿ, ಮತದಿಂದ ದೂರ ಉಳಿದು ಕಾರ್ಯನಿರ್ವಹಿಸುತ್ತಿವೆ. ಜನರ ಈ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು. ಜಡ್ಜ್ಗಳು ತಮ್ಮ ಕರ್ತವ್ಯವನ್ನು ದೈವತ್ವದ ಕೆಲಸವೆಂದು ಭಾವಿಸಿಕೊಂಡಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದು. ಇಂತಹ ಅವಕಾಶದಿಂದ ನ್ಯಾಯಾಂಗ ಕ್ಷೇತ್ರ ಮುನ್ನೆಲೆಗೆ ಬಂದು ಕಕ್ಷಿದಾರರ ದೃಷ್ಟಿಯಲ್ಲಿ ಕೋರ್ಟ್ಗಳು ್ಲ ನ್ಯಾಯದೇಗುಲಗಳಾಗಿ ಮಾರ್ಪಾಟಾಗುತ್ತವೆ. ಈ ಕೈಂಕರ್ಯದಲ್ಲಿ ಸಮಾಜದ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮವೂ ನ್ಯಾಯಾಂಗಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ನಾನು ಹೈಕೋರ್ಟ್ ಜಡ್ಜ್ ಆಗಿ ಕಾರ್ಯನಿರ್ವಹಿಸುವಾಗ ಲೋಕ್ ಅದಾಲತ್ ಮೂಲಕ ಜನರಿಗೆ ಕೋರ್ಟ್ಗಳು ಹತ್ತಿರವಾಗುವಂತೆ ಕೆಲಸ ಮಾಡಿದ್ದೆವು. ಕೇವಲ ಒಂದು ವರ್ಷ 4 ತಿಂಗಳ ಅವಧಿಯಲ್ಲಿ ಆರು ಬಾರಿ ನಡೆಸಿದ ಲೋಕ್ ಅದಾಲತ್ನಲ್ಲಿ ದಾಖಲೆಯ 1.8 ಕೋಟಿ ಪ್ರಕರಣಗಳು ಇತ್ಯರ್ಥ ಕಾಣುವಂತಾಯಿತು. ಇಂತಹ ಬದಲಾವಣೆಯನ್ನು ಜನ ಬಯಸುತ್ತಿದ್ದು, ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆಯಲ್ಲಿ ನ್ಯಾಯಾಂಗ ಕ್ಷೇತ್ರ ನವಚೈತನ್ಯ ಪಡೆದಲ್ಲಿ ಕಕ್ಷಿದಾರರಿಗೆ ಅಷ್ಟರಮಟ್ಟಿಗೆ ನೆಮ್ಮದಿ ಸಿಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ.
| ಬಿ.ವೀರಪ್ಪ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಇದಕ್ಕಾಗಿ ಕೆಲ ವಿಷಯಗಳ ಕಡೆಗೆ ಗಮನಹರಿಸಲೇಬೇಕಿದೆ. ಅತಿ ವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಎಲ್ಲರಿಗೂ ಶಿಕ್ಷಣ, ಕೌಶಲ ನೀಡಬೇಕು. ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸುವ ಮೂಲಕ ರಾಷ್ಟ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಯಾರೂ ಪರಾವಲಂಬಿಯಾಗದೆ, ಸ್ವಾವಲಂಬಿಗಳಾಗಿ ಭವಿಷ್ಯ ರೂಪಿಸಿಕೊಳ್ಳುವಂತೆ ಚಿಕ್ಕಂದಿನಿಂದಲೇ ಗುರಿಯೊಂದಿಗೆ ಮುನ್ನಡೆಸುವ ಕಾರ್ಯ ಪಾಲಕರು-ಶಿಕ್ಷಕರಿಂದ ಆಗಬೇಕು.
ಭವ್ಯ ಭಾರತ ನಿರ್ವಣ, ವಿಶ್ವ ಗುರುವಾಗಿಸುವ ಕನಸು ನನಸಾಗಿಸುವ ಹೊಣೆ ನಮ್ಮ ಯುವಕ-ಯುವತಿಯರ ಮೇಲಿದೆ. ಅವರೇ ನಮ್ಮ ಭವಿಷ್ಯದ ಪೀಳಿಗೆ. ಅವರು ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಂಡರೆ ಕುಟುಂಬ ಕೂಡ ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಲಿದೆ. ಒಂದು ವೇಳೆ ಯುವಸಮೂಹದ ಸಂಖ್ಯೆ ಕ್ಷೀಣಿಸಿದರೂ ದೇಶಕ್ಕೆ ಹೆಚ್ಚು ನಷ್ಟ. ಹೀಗಾಗಿ, ಮೊದಲು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮೂಡಿಸಬೇಕು.
ಪ್ರತಿಯೊಬ್ಬರಲ್ಲೂ ರಾಷ್ಟ್ರಭಕ್ತಿ, ನಮ್ಮ ಇತಿಹಾಸ, ಸಂಸ್ಕೃತಿ, ಪಾರಂಪರಿಕ ಐತಿಹಾಸಿಕ ತಾಣಗಳು, ವಾಸ್ತುಶಿಲ್ಪಗಳು, ಕಲೆಗಳ ಕುರಿತು ಬೆಳಕು ಚೆಲ್ಲಿ ಹೆಮ್ಮೆ, ಗೌರವ, ಪ್ರೀತಿ, ಕಾಳಜಿ, ಅಭಿಮಾನ ಮೂಡಿಸುವ ಕೆಲಸವಾಗಬೇಕು. ಇದರಿಂದಲೂ ಭಾರತವನ್ನು ಸಶಕ್ತವಾಗಿ ಮುನ್ನಡೆಸಲು ಸಹಕಾರಿಯಾಗಲಿದೆ.
ಮಹಿಳೆಯರು, ಯುವಸಮೂಹ ಒಳಗೊಂಡು ಇಡೀ ಮಾನವ ಕುಲದ ಸಬಲೀಕರಣ ಆಗಬೇಕಿದೆ. ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಈ ಕೆಲಸ ಆಗುತ್ತಿದೆ. ಇನ್ನೂ ಹೆಚ್ಚಿನ ಒತ್ತು ನೀಡಿ ವಿಶೇಷ ಯೋಜನೆ ರೂಪಿಸಿ, ಅವುಗಳನ್ನು ವ್ಯಾಪಕವಾಗಿ ಪ್ರಚುರಪಡಿಸಿ, ಅನುಷ್ಠಾನಗೊಳಿಸಿದಲ್ಲಿ ಅಗಾಧ ಯಶಸ್ಸು ಸಾಧಿಸಬಹುದಾಗಿದೆ. ನಮ್ಮ ಭಾರತ ಎಲ್ಲ ದೇಶಗಳಂತಲ್ಲ. ಬೇರೆಯವರಿಗಿಂತಲೂ ನಮ್ಮ ದೇಶಕ್ಕೆ ಅತಿದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆಯುವಷ್ಟರಲ್ಲಿ ಇಷ್ಟೆಲ್ಲ ಅಭಿವೃದ್ಧಿ, ಸಾಧನೆ ಆಗಿದೆ ಎಂದಾದರೆ ಅದಕ್ಕೆ ಭಾರತೀಯರ ಕಠಿಣ ಪರಿಶ್ರಮ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಎಲ್ಲರೂ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಕ್ತ ಮನಸ್ಸಿನಿಂದ ಕೈಜೋಡಿಸಲಿ. ಭಾರತ ವಿಶ್ವಗುರುವಿನ ಸ್ಥಾನದಲ್ಲಿ ಕಂಗೊಳಿಸುವಂತಾಗಲಿ.
| ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ, ಚಿತ್ರದುರ್ಗ
| ರಾಜ್ ಬಿ. ಶೆಟ್ಟಿ, ನಟ-ನಿರ್ದೇಶಕ
ಇಂದು ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಕೆಲವೊಂದು ಸಂಶೋಧನೆಗಳು ನಡೆಯುತ್ತಿವೆ. ಆದರೆ, ಅದು ಲ್ಯಾಬ್ನಿಂದ ಲ್ಯಾಂಡ್ವರೆಗೆ ತಲುಪುವುದೇ ಇಲ್ಲ. ಅದರ ಫಲಿತಾಂಶ ಕೇವಲ ಲ್ಯಾಬ್ಗೆ ಸೀಮಿತವಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸಂಶೋಧನೆ ಎಂಬುದು ಅಂಕ ಗಳಿಕೆ ಇಲ್ಲವೆ ಪದೋನ್ನತಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸದ ಸಂಗತಿ.
ಸಂಶೋಧನೆಗೆ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಹಾಗೂ ಪೂರಕ ಸನ್ನಿವೇಶ ಸೃಷ್ಟಿಸುವ ಕೆಲಸವೂ ಆಗಬೇಕಿದೆ. ನಮ್ಮಲ್ಲಿರುವ ಜಟಿಲ ಕಾಯ್ದೆಗಳು, ವಿವಿಧ ಹಂತಗಳಲ್ಲಿರುವ ಭ್ರಷ್ಟಾಚಾರ, ಆಡಳಿತ ಯಂತ್ರದ ಅಸಹಕಾರದಿಂದ ಅನೇಕರು ಸಂಶೋಧನೆಯಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಸೊರಗುತ್ತಿರುವುದು ನಮ್ಮ ಕೃಷಿ ಕ್ಷೇತ್ರ ಎಂಬುದು ದುರಂತದ ವಿಚಾರ.
ಪ್ರಸ್ತುತ ಸನ್ನಿವೇಶದಲ್ಲಿ ಅನೇಕ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಕೃಷಿ ಕ್ಷೇತ್ರವನ್ನು ಆವರಿಸಿಕೊಂಡರೆ ಅನೇಕ ಕ್ರಾಂತಿಕಾರಿ ಬದಲಾವಣೆಗಳಾಗುವುದರಲ್ಲಿ ಅನುಮಾನ ಬೇಡ. ಆದರೆ, ಈ ನಿಟ್ಟಿನಲ್ಲಿ ಪೂರಕ ಸಂಶೋಧನೆಗಳು ನಡೆಯಬೇಕು. ಇದಕ್ಕೂ ಆಡಳಿತ ಯಂತ್ರದ ಸಹಕಾರ ಅಗತ್ಯ.
ಸಂಶೋಧನೆಗೆ ಪೂರಕವಾಗಿ ಹೊಸ ಉತ್ಪನ್ನಗಳಿಗೆ ಅನುಮತಿ, ದಾಖಲೆಗಳ ಸಂಗ್ರಹ, ಅಂಕಿಅಂಶಗಳನ್ನು ಪಡೆಯುವುದು, ಪರವಾನಗಿ ಹೀಗೆ ಹಲವು ಹಂತಗಳಲ್ಲಿ ಓಡಾಟ ನಡೆಸುವುದರಿಂದ ಬೇಸತ್ತು ಅನೇಕರು ಅದರ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಿದ್ದಾರೆ. ಹಾಗಾಗಿ ಏಕಗವಾಕ್ಷಿ ಮಾದರಿಯಲ್ಲಿ, ತ್ವರಿತವಾಗಿ ಮತ್ತು ಕಾಲಮಿತಿಯಲ್ಲಿ ಸರ್ಕಾರದಿಂದ ಎಲ್ಲವೂ ದೊರೆತರೆ ಸಂಶೋಧಕರ ಉತ್ಸಾಹವೂ ಹೆಚ್ಚುತ್ತದೆ. ಇದರಿಂದ ಭವಿಷ್ಯದಲ್ಲಿ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ.
ಅಡಕೆ ರಾಷ್ಟ್ರದ ಆರ್ಥಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಳೆ ಹಾಗೂ ಪ್ರದೇಶದ ವಿಸ್ತರಣೆಯಾಗುತ್ತಿರುವುದೂ ಕೆಲವೊಮ್ಮೆ ಆತಂಕ ಮೂಡಿಸುವುದುಂಟು. ಅಡಕೆಯ ಪರ್ಯಾಯ ಬಳಕೆ ಬಗ್ಗೆ ಸಂಶೋಧನೆಗಳು ಹೆಚ್ಚಬೇಕು. ಆದರೆ, ಅಡಕೆ ಬಗ್ಗೆ ಕೆಲವು ಆರೋಪಗಳಿರುವುದರಿಂದ ಯಾರೂ ಸಂಶೋಧನೆ ಮಾಡುವ, ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಅಡಕೆ ಕ್ಯಾನ್ಸರ್ಕಾರಕವಲ್ಲ, ಆರೋಗಕ್ಕೆ ಪೂರಕ ಎಂದು ಒಮ್ಮೆ ಸರ್ಕಾರ ಬಲವಾಗಿ ಪ್ರತಿಪಾದನೆ ಮಾಡಿ ಅದಕ್ಕೆ ಕಾನೂನಿನ ರಕ್ಷಣೆ ಒದಗಿಸಿದರೆ ಅಡಕೆ ಸಂಶೋಧನೆಗಳಿಗೆ ಪೂರಕ ವಾತಾವರಣ ನಿರ್ವಣವಾಗುತ್ತದೆ. ಇಂತಹ ಪ್ರಯತ್ನಗಳು ತ್ವರಿತವಾಗಿ ನಡೆಯಬೇಕಿದೆ.
| ನಿವೇದನ್ ನೆಂಪೆ, ಶಿವಮೊಗ್ಗ ಅರೇಕಾ ಟೀ ಸಂಶೋಧಕ
ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದರೆ ಅಲ್ಲಿ ಎರಡು ವಿಷಯಗಳು ಬಹಳ ಮುಖ್ಯವಾಗುತ್ತದೆ. ಒಂದು ಶಿಕ್ಷಣ. ಇದು ಎಲ್ಲರಿಗೂ ಸಮಾನವಾಗಿ ಸಿಗುವಂತಾಗಬೇಕು. ಇನ್ನೊಂದು ಉದ್ಯೋಗ. ಇತ್ತೀಚೆಗೆ ಸುಡಾನ್ ದೇಶದ ಬಗ್ಗೆ ಒಂದು ವೀಡಿಯೋ ನೋಡುತ್ತಿದ್ದೆ. ಆ ದೇಶಕ್ಕೆ ಹೋಲಿಸಿದರೆ ಭಾರತ ಬಹಳ ಮುಂದಿದೆ. ಆದರೆ, ಇನ್ನೂ ಮುಂದೆ ಹೋಗುವ ಸಾಧ್ಯತೆ, ಅವಕಾಶ ನಮಗಿದೆ. ಯಾವುದೋ ದೇಶದ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕರೆ ಸಾಕು ಎನ್ನುವ ಮನೋಭಾವ ದೂರಗೊಳಿಸಿ ನಮ್ಮ ದೇಶ, ನಮ್ಮ ಸಂಸ್ಥೆ ಎನ್ನುವ ಭಾವನೆ ಪಾಲಕರು ಹಾಗೂ ಮಕ್ಕಳಲ್ಲಿ ಬೆಳೆಯಬೇಕು. ಇನ್ನು ಈಗಿನ ಯುವ ಜನತೆಯ ಬಗ್ಗೆ ಹೇಳುವುದಾದರೆ, ಬೇಡದಿರುವ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡಬಾರದು. ಸ್ವಾಂತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಗತ್ ಸಿಂಗ್ ಯುವಕರಿದ್ದಾಗಲೇ ದೇಶಕ್ಕಾಗಿ ಹೋರಾಡಿದರು. ದೇಶಕ್ಕಾಗಿ ಪ್ರಾಣ ಬಿಟ್ಟರು. ಆದರೆ, ಈಗಿನ ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ಮುಳಗಿಹೋಗದೇ ಮುಂದೆ ಬರಬೇಕು. ಆಗ, ಭಾರತ ವಿಶ್ವ ಗುರು ಆಗಬಹುದು.
| ರಂಜನಿ ರಾಘವನ್, ನಟಿ
| ಮಂಜುನಾಥ ನಾಯಕ ಚಳ್ಳೂರು, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತ
ಭವಿಷ್ಯದಲ್ಲಿ ಭಾರತದ ಪ್ರತಿಯೊಬ್ಬರೂ ಆರೋಗ್ಯವಂತರಾಗಿಬೇಕು, ಅದಕ್ಕಾಗಿ ಎಲ್ಲರಿಗೂ ಆರೋಗ್ಯ ಸೇವೆ ಕೈಗೆಟುಕುವಂತಿರಬೇಕು. ಈ ನಿಟ್ಟಿನಲ್ಲಿ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಅಭಿವೃದ್ಧಿ ಹಾಗೂ ಬಲಪಡಿಸುವ ಕಾರ್ಯವಾಗಬೇಕು. ಮೂಲಸೌಕರ್ಯ ಹೆಚ್ಚಿಸುವುದರ ಜೊತೆಗೆ ನುರಿತ ಮಾನವ ಸಂಪನ್ಮೂಲವನ್ನು ಹೊಂದಬೇಕಿದೆ.
‘ಎಲ್ಲರಿಗೂ ಆರೋಗ್ಯ’ ದೇಶದ ಪ್ರತಿಯೊಬ್ಬ ಪ್ರಜೆಯೂ ಆರೋಗ್ಯದಿಂದಿರಲು ಸಾಧ್ಯವಾಗಬೇಕು. ಇದರಿಂದ ಮಾನವನ ಕೆಲಸಗಳಲ್ಲಿನ ಗುಣಮಟ್ಟ ಹೆಚ್ಚಲಿದ್ದು, ದೇಶದ ಆರ್ಥಿಕ ಹೊರೆ ತಗ್ಗಲಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಸಾಧನೆ ಮಾಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಏಮ್್ಸ ಮಾದರಿಯ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗುತ್ತಿವೆ. ಮುಂದಿನ 25 ವರ್ಷಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ನಿರ್ವಣಗೊಂಡು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ದೊರೆಯುವಂತಾಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ.
ಆರೋಗ್ಯವಂತ ಸಮಾಜ ನಿರ್ಮಾಣ: ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಂದಾಜು ಜಿಡಿಪಿಯ ಶೇಕಡಾ 3.2 (6 ಲಕ್ಷ ಕೋಟಿ ರೂ.) ಖರ್ಚಾಗುತ್ತಿದೆ. ಈ ಖರ್ಚನ್ನು ತಗ್ಗಿಸಲು ಹಾಗೂ ಭಾರತವನ್ನು ಆರ್ಥಿಕವಾಗಿ ಸಬಲವಾಗಿಸಲು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಿದೆ. ದೇಶವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರಾಜಧಾನಿಯಾಗುತ್ತಿದ್ದು, ಈ ಅಸಾಂಕ್ರಾಮಿಕ ರೋಗ (ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ, ಬೊಜ್ಜು) ಗಳನ್ನು ತಡೆಯಬೇಕಿದೆ. ಮಾನಸಿಕ ಆರೋಗ್ಯ ಸುಧಾರಣೆಗೂ ಬಹಳ ಪ್ರಾಮುಖ್ಯತೆ ನೀಡಬೇಕಿದೆ. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸಬೇಕಿದೆ.
ಡಿಜಿಟಲ್ ಡೇಟಾ: ಅಂದಾಜು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಸಹಜವಾಗಿಯೇ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯದ ಕುರಿತು ಡಿಜಿಟಲ್ ದತ್ತಾಂಶ ಸಂಗ್ರಹಿಸಿದರೆ ಸಂಶೋಧನೆಗೆ ಅನುಕೂಲವಾಗಲಿದೆ. ಇದರಿಂದ ಯಾವ ಯಾವ ಕಾಯಿಲೆ ಎಷ್ಟು ಪ್ರಮಾಣದಲ್ಲಿದೆ, ಯಾವ ವರ್ಗದವರಲ್ಲಿ ಇದೆ, ಅದಕ್ಕೆ ಕಾರಣ ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಕ್ರಮವಹಿಸಲು ಸಾಧ್ಯವಾಗಲಿದೆ.
ವಯಸ್ಸಾದವರ ಆರೈಕೆ: ಅಧ್ಯಯನ ಒಂದರ ಪ್ರಕಾರ ಮುಂದಿನ 25-30 ವರ್ಷದ ವೇಳೆಗೆ ವಯಸ್ಸಾದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ. 2011ರ ಜನಗಣತಿಯಂತೆ ಸದ್ಯ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಶೇ. 6.6 ಇದ್ದು, 2050ರ ವೇಳೆಗೆ ಈ ಸಂಖ್ಯೆ ಶೇ. 3 ಹೆಚ್ಚಾಗಲಿದೆ. ಅಂದರೆ ಭಾರತ ಮುಂದಿನ 15-20 ವರ್ಷಗಳಲ್ಲಿ ವಯಸ್ಸಾದವರ ರಾಜಧಾನಿಯಾಗಲಿದೆ.
ಕೃತಕ ಬುದ್ಧಿಮತ್ತೆ: ದೇಶದ ಆರೋಗ್ಯ ವಲಯದಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಭವಿಷ್ಯದಲ್ಲೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಸಂಶೋಧನೆಯ ಅಗತ್ಯವಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ತಲೆ ಎತ್ತಲಿದ್ದು, ಭಾರತ ಜಗತ್ತಿನಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರಲ್ಲಿ ವಿಶ್ವ ಗುರು ಆಗಲಿದೆ.
ಇಂಟಿಗ್ರೇಟೆಡ್ ಮೆಡಿಸಿನ್: ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇಂಟಿಗ್ರೇಟೆಡ್ ಮೆಡಿಸಿನ್ ಬಹಳ ಮಹತ್ವ ಪಡೆದುಕೊಂಡಿದೆ. ಆದರೆ ಇದರ ಬಗ್ಗೆ ವೈಜ್ಞಾನಿಕ ಪುರಾವೆಗಳ ಮೇಲೆ ಸಂಶೋಧನೆ ಆಗಬೇಕಿದೆ. ಇದರ ಉಪಯೋಗಗಳ ಕುರಿತು ತಾಂತ್ರಿಕವಾಗಿಯೂ ಸಾಬೀತಾಗಬೇಕಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ಎಲ್ಲ ಅಂಶಗಳು ಸಾಧ್ಯವಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕಿದೆ.
| ಡಾ.ಎನ್.ಎಸ್. ನಾಗೇಶ್, ನಿರ್ದೇಶಕರು, ಗ್ಯಾಸ್ಟ್ರೋ ಎಂಟರಾಲಜಿ ಸೈನ್ಸಸ್ ಆಂಡ್ ಆರ್ಗ್ಯಾನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆ (ಐಗಾಟ್)